ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ವಿವಾದಿತ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿ ದಿನವಾದ ಶುಕ್ರವಾರ ಹಿಂದೂಗಳಿಗೆ ಪೂಜೆ ಸಲ್ಲಿಸಲು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿಯಂದು ಮಧ್ಯಾಹ್ನದ ನಂತರ ಪೂಜೆಗೆ 15 ಹಿಂದೂಗಳಿಗೆ ಅವಕಾಶ ಕೊಟ್ಟಿದೆ. ಪೂಜೆ ಸಲ್ಲಿಸುವ 15 ಮಂದಿ ಪಟ್ಟಿ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಇಲ್ಲದಿದ್ದರೆ ಅನುಮತಿ ನೀಡುವುದಿಲ್ಲ ಎಂದು ಗುರುವಾರ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ತಿಳಿಸಿದೆ.
ಬಿಗಿ ಬಂದೋಬಸ್ತ್‌ಗೆ ಸೂಚನೆ:ಕಳೆದ ಬಾರಿಯೂ ಇದೇ ರೀತಿ ಹೈಕೋರ್ಟ್ ಪೀಠವು ಪೂಜೆಗೆ ಅನುಮತಿ ಕೊಟ್ಟಿತ್ತು. ಆದಾಗ್ಯೂ ಪೂಜೆ ನಂತರ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದವು. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾಗಿದ್ದ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ, ಎಸ್ಪಿ ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಹೀಗಾಗಿ ಈ ಬಾರಿ ಹಿಂದಿನ ಹಿಂಸಾತ್ಮಕ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಜಿಲ್ಲಾಡಳಿತಕ್ಕೆ ನ್ಯಾಯಾಲಯಕ್ಕೆ ಇದೇ ವೇಳೆ ಸೂಚಿಸಿದೆ.
ಬೆಳಗ್ಗೆ ಮುಸ್ಲಿಮರಿಂದ ಪೂಜೆ:ಈಗಾಗಲೇ ವಕ್ಫ್ ನ್ಯಾಯ ಮಂಡಳಿ ಈ ದರ್ಗಾದಲ್ಲಿ ಮಹಾಶಿವರಾತ್ರಿಯಂದು ಹಿಂದೂಗಳು ರಾಘವಚೈತನ್ಯರ ಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠದಲ್ಲಿ ರಾಘವಚೈತನ್ಯ ಮಂದಿರದ ಜೀರ್ಣೋದ್ಧಾರ ಸಮಿತಿ ಅರ್ಜಿ ಸಲ್ಲಿಸಿ, ಮಹಾಶಿವರಾತ್ರಿಯಂದು ರಾಘವಚೈತನ್ಯರ ಶಿವಲಿಂಗಕ್ಕೆ ಸುಮಾರು 100 ಮಂದಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿತ್ತು. ಅದೇ ರೀತಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯಲ್ಲಿ, ರಾಘವಚೈತನ್ಯರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು 500 ಹಿಂದೂಗಳಿಗೆ ಅನುಮತಿಗಾಗಿ ಮನವಿ ಮಾಡಿದ್ದರು.
ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಮಹಾಶಿವರಾತ್ರಿಯಂದು ಮಧ್ಯಾಹ್ನದ ವೇಳೆಗೆ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಸೇರಿ 15 ಹಿಂದೂಗಳಿಗೆ ಪೂಜೆ ಸಲ್ಲಿಸಲು ಹಾಗೂ ಅಂದು ಶುಕ್ರವಾರ ಇರುವುದರಿಂದ ಮುಸ್ಲಿಂ ಸಮುದಾಯದ 15 ಮಂದಿಗೆ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ.ಕಲಬುರಗಿಯಲ್ಲಿ 25 ಮಂದಿಗೆ ಶಿವಮಾಲೆ ದೀಕ್ಷೆರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆಗೆ ಅವಕಾಶ ದೊರಕಿದ ಬೆನ್ನಲ್ಲೇ ಆಂದೋಲಾ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಕಲಬುರಗಿ ರಾಮ ಮಂದಿರದಲ್ಲಿ ಹೋಮಾದಿಗಳ ಸಮೇತ ಶಿವಭಕ್ತ 25 ಯುವಕರಿಗೆ ಶಿವಮಾಲೆ ಧಾರಣೆ ದೀಕ್ಷೆ ನೀಡಲಾಯ್ತು. ಈಗಾಗಲೇ ಆಳಂದದಲ್ಲಿ 10 ಯುವಕರು ಶಿವಮಾಲೆ ದೀಕ್ಷೆ ತೊಟ್ಟಿದ್ದಾರೆ.