ಸಾರಾಂಶ
ಕನ್ನಡಪ್ರಭ ವಾರ್ತೆ ಬ್ರಹ್ಮಾವರಇಲ್ಲಿನ ಕುಂಜಾಲು ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಗೋವಿನ ರುಂಡವನ್ನು ತಂದು ಎಸೆದಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಕುಂಜಾಲು ರಾಮ ಮಂದಿರದಲ್ಲಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ, ಈ ಅಮಾನುಷ ಕೃತ್ಯ ಎಸಗಿದ ವ್ಯಕ್ತಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಈ ಘಟನೆಯ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಬ್ರಹ್ಮಾವರ ಪರಿಸರದಲ್ಲಿ ಇದೇ ರೀತಿ ಘಟನೆಗಳು ನಡೆದಿದ್ದರೂ ಪೊಲೀಸ್ ಇಲಾಖೆ ಯಾರನ್ನೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕರಾವಳಿ ಜಿಲ್ಲೆಯಲ್ಲಿ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರನ್ನು ದಮನಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುವ ಮನಸ್ಥಿತಿಯನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದರು.ಘಟನೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಣ್ಣೊರೆಸುವ ತಂತ್ರವಾಗಿದೆ. ಗೋಮಾತೆಯ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ಕೊಡಲೇ ರಾಜ್ಯದ ಗೃಹ ಸಚಿವರಿಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ದುಷ್ಕರ್ಮಿಗಳ ಬಂಧನಕ್ಕೆ ಅಗ್ರಹಿಸಲಿ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಲಿ ಎಂದು ಸವಾಲು ಹಾಕಿದರು.ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ಹಿಂದೂ ಸಂಘಟನೆಯ ಪ್ರಮುಖರಾದ ದಿನೇಶ್ ಮೆಂಡನ್, ಮಹೇಶ್ ಬೈಲೂರು, ರತ್ನಾಕರ ಅಮೀನ್, ಬಿಜೆಪಿ ಮುಖಂಡರಾದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ನಿಶಾನ್ ರೈ, ಗೌತಮ್ ಅಗ್ರಹಾರ, ಮನೋಜ್ ಕುಮಾರ್ ಶೆಟ್ಟಿ, ಗುರುರಾಜ್ ರಾವ್, ಗಣೇಶ್ ಕುಲಾಲ್, ಆದರ್ಶ ಶೆಟ್ಟಿ ಕೆಂಜೂರು, ಮಹೇಂದ್ರ ನೀಲಾವರ, ಹರೀಶ್ ಶೆಟ್ಟಿ ಚೇರ್ಕಾಡಿ, ಎಸ್. ನಾರಾಯಣ, ರಾಘವೇಂದ್ರ ಕುಂದರ್, ಧನಂಜಯ ಅಮೀನ್, ಸುನೀಲ್ ಕೊಕ್ಕರ್ಣೆ, ಅಕ್ಷೇಂದ್ರ, ರಮಾನಂದ ಶೆಟ್ಟಿ ಕೆಂಜೂರು, ಉಮೇಶ್ ನಾಯ್ಕ್, ಸುರೇಶ್ ಪೇತ್ರಿ, ದೇವಾನಂದ, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.