ಗೋವುಗಳ ಕೆಚ್ಚಲು ಕತ್ತರಿಸಿದ ಪ್ರಕರಣ: ಎಲ್ಲ ಆರೋಪಿಗಳ ಬಂಧನಕ್ಕೆ ರವಿಕುಮಾರ್‌ ಆಗ್ರಹ

| Published : Jan 14 2025, 01:02 AM IST

ಗೋವುಗಳ ಕೆಚ್ಚಲು ಕತ್ತರಿಸಿದ ಪ್ರಕರಣ: ಎಲ್ಲ ಆರೋಪಿಗಳ ಬಂಧನಕ್ಕೆ ರವಿಕುಮಾರ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿದ ಘಟನೆ ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ನಗರದ ಮಿನಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಯಿತು.ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ರಾಜ್ಯ ಸರ್ಕಾರದಿಂದ ಗೋವುಗಳಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿದ ಘಟನೆ ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ನಗರದ ಮಿನಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಯಿತು.

ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ರಾಜ್ಯ ಸರ್ಕಾರದಿಂದ ಗೋವುಗಳಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ. ಚಾಮರಾಜಪೇಟೆಯಲ್ಲಿ ನಡೆದ ಕೃತ್ಯ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ. ಸಿಸಿ ಕ್ಯಾಮೆರಾ ಬಂದ್‌ ಮಾಡಿ ಕೆಚ್ಚಲು ಕತ್ತರಿಸಿದ್ದಲ್ಲದೆ, ಕಾಲುಗಳಿಗೆ ಮಚ್ಚಿನಿಂದ ಗಾಯಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಬಿಹಾರದ ವ್ಯಕ್ತಿಯನ್ನು ಸರ್ಕಾರ ಬಂಧಿಸಿರುವುದು ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ. ಎಲ್ಲ ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು. ಸಂತ್ರಸ್ತ ಹೈನುಗಾರರಿಗೆ ಕೂಡಲೆ ತಲಾ 5 ಲಕ್ಷ ರು. ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಪಶು ಆಸ್ಪತ್ರೆಯ ಜಾಗ ಖಾಲಿ ಮಾಡಿಸಲು ಮತಾಂಧ ಶಕ್ತಿಗಳು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ ರವಿಕುಮಾರ್‌, ಕಾಂಗ್ರೆಸ್‌ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಗೋವುಗಳ ಅಕ್ರಮ ಸಾಗಾಟ, ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋವುಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದರು.

ಪಶು ಸಂಗೋಪನೆ ಸಚಿವರು ಸ್ಥಳಕ್ಕೆ ಬರಬೇಕಿತ್ತು, ಆದರೆ ಬಂದಿಲ್ಲ. ಜಮೀರ್ ಅಹ್ಮದ್‌ ಮೂರು ಹಸು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಹಸುಗಳ ಮೇಲಾದ ಭೀಭತ್ಸ ಕೃತ್ಯ ಮರೆಮಾಚಲು ಸಾಧ್ಯವಿಲ್ಲ. ಸರ್ಕಾರ ಗೋ ಹಂತಕರ ಬ್ಲ್ಯಾಕ್ ಲಿಸ್ಟ್ ರೆಡಿ ಮಾಡಲಿ. ನೂರಾರು ಜನ ಗೋ ಹಂತಕರು ಕರ್ನಾಟಕದಲ್ಲಿ ಇದ್ದಾರೆ. ಅವರನ್ನು ಬಂಧಿಸುವ ಧೈರ್ಯ ಈ ಸರ್ಕಾರಕ್ಕೆ ಇದೆಯಾ? ಈ ಸರ್ಕಾರ ಏನು ಮಾಡಲ್ಲ ಎಂಬ ಭಂಡ ಧೈರ್ಯ ಗೋ ಹಂತಕರಿಗೆ ಇದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಬಂದಾಗ ಹಿಂದೂ ಯುವಕರು, ಗೋವುಗಳಿಗೆ ಉಳಿಗಾಲವಿಲ್ಲ. ಸರ್ಕಾರ ಹಿಂದೂ ಸಮಾಜದ ಮೇಲೆ ದೌರ್ಜನ್ಯ ಎಸಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಗೋ ಸಾಗಾಟ ತಡೆಯುವವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌ ಮಾತನಾಡಿದರು. ವಿಧಾನ ಷರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು, ಮೇಯರ್‌ ಮನೋಜ್‌ ಕುಮಾರ್‌, ಉಪಮೇಯರ್‌ ಭಾನುಮತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಪ್ರಮುಖರಾದ ರವೀಂದ್ರ ಶೆಟ್ಟಿಉಳಿದೊಟ್ಟು, ಪ್ರೇಮಾನಂದ ಶೆಟ್ಟಿ, ರಾಜೇಶ್‌ ಕಾವೇರಿ ಮತ್ತಿತರರಿದ್ದರು.