ಸಾರಾಂಶ
ಶಿರಹಟ್ಟಿ: ಈ ಬಾರಿ ತಾಲೂಕಿನಲ್ಲಿ ಉತ್ತಮ ಮುಂಗಾರು ಮಳೆ ಸುರಿದಿದ್ದು, ಗೋವಿನ ಜೋಳ ಗುರಿಗಿಂತಲೂ ಅಧಿಕ ಬಿತ್ತನೆ ಯಾಗಿದೆ. ಅದರಂತೆ ಶೇ. ೭೨ರಷ್ಟು ಪ್ರದೇಶದಲ್ಲಿ ಹೆಸರು ಕೂಡ ಬಿತ್ತನೆಯಾಗಿದೆ. ಬೆಳೆಯು ಉತ್ತಮವಾಗಿದೆ. ಆದರೆ ಅಲ್ಲಲ್ಲಿ ರೋಗಬಾಧೆ ಕಾಡುತ್ತಿದ್ದು ಹತೋಟಿಗೆ ರೈತರು ಮುಂದಾಗಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಸಲಹೆ ನೀಡಿದರು. ತಾಲೂಕಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗೆ ತಗುಲಿರುವ ರೋಗಬಾಧೆ ಪರಿಶೀಲನೆ ನಡೆಸಿ ಮಾತನಾಡಿದರು. ಈ ಬಾರಿ ಒಟ್ಟು ೩೬೪೧೧ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಇಲ್ಲಿಯ ವರೆಗೆ ೩೦೯೧೯ ಹೆಕ್ಟೇರ್ ಬಿತ್ತನೆಯಾಗಿದೆ. ಹೆಸರು, ಶೇಂಗಾ, ಗೋವಿನ ಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿವೆ ಎಂದರು. ಹೆಸರು ೩೨೦೦ ಬಿತ್ತನೆ ಗುರಿ ಹೊಂದಿದ್ದು, ೨೨೫೦ ಹೆಕ್ಟೇರ್ ಬಿತ್ತನೆಯಾಗಿದೆ. ಹೆಸರು ಬೆಳೆಗೆ ಅಲ್ಲಲ್ಲಿ ಹಳದಿ ನಂಜುರೋಗ ಮತ್ತು ಬೂದು ರೋಗ ಬಾಧೆ ಕಾಣಿಸುತ್ತಿದೆ. ಅದೇ ರೀತಿ ಗೋವಿನ ಜೋಳ ೨೭.೧೪೬ ಬಿತ್ತನೆ ಗುರಿ ಇದ್ದು, ೨೯.೫೨೬ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಲ್ಲಲ್ಲಿ ಲದ್ದಿಹುಳು ಬಾಧೆ ಕಂಡು ಬಂದಿರುತ್ತಿದೆ. ಹಳದಿ ನಂಜುರೋಗ ಬಾಧೆ ಕಾಣಿಸಿಕೊಂಡಿರುವ ಹೆಸರು ಬೆಳೆಯನ್ನು ಪ್ರಾರಂಭದ ಹಂತದಲ್ಲಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ನಂತರ ಥೈಮಿಥೋಯೇಟ್ ೧.೭ ಮಿ.ಲೀ ಅಥವಾ ಇಮಿಡಾಕ್ಲೋಪ್ರಿಡ್ ೦.೩ ಮಿ.ಲೀ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ ಕೂಡಿಸಿ ಸಿಂಪರಣೆ ಮಾಡಿ ರೋಗ ಉಲ್ಬಣಿಸುವುದನ್ನು ತಡೆಯಬೇಕು. ಅದೇ ರೀತಿ ಗೋವಿನ ಜೋಳದ ಬೆಳೆಗೆ ಕಾಣಿಸಿಕೊಂಡಿರುವ ಲದ್ದಿ ಹುಳು ನಿರ್ವಹಣೆಯನ್ನು ಬಿತ್ತಿದ ೧೫-೨೦ ದಿನಗಳ ನಂತರ ಪ್ರತಿ ಲೀಟರ್ ನೀರಿಗೆ ೦.೫ ಮಿ.ಲೀ. ಸ್ಪೈನಟೋರಮ್ ೧೧.೭ ಎಸ್.ಸಿ. ಅಥವಾ ೦.೨ ಮಿ.ಲೀ. ಕ್ಲೋರಾಂಟ್ರಿನಿಲಿಪ್ರೋಲ್ ೧೮.೫ ಎಸ್.ಸಿ. ಅಥವಾ ೦.೨ಗ್ರಾಂ ಇಮಾಮೆಕ್ಟಿನ್ ಬೆಂಜೋಯಿಟ್ ೫ ಎಸ್.ಜಿ. ಕೀಟನಾಶಕವನ್ನು ಬೆರೆಸಿ ಸಿಂಪರಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.ನಾಲ್ಕೈದು ವರ್ಷಗಳಿಂದ ಹೊಸ ನಮೂನೆಯ ಲದ್ದಿಹುಳು ಕೀಡೆಯು ಗೋವಿನ ಜೋಳ ಬೆಳೆಯಲ್ಲಿ ಕಂಡು ಬರುತ್ತಿದೆ. ಪ್ರಸಕ್ತ ವರ್ಷವೂ ಮುಂಗಾರು ಹಂಗಾಮಿನಲ್ಲಿ ಹಾಕಿದ ಒಂದು ತಿಂಗಳ ಬೆಳೆಯಲ್ಲಿ ಕಾಣಿಸಿಕೊಂಡಿದೆ. ಈ ಕೀಡೆಯು ಸುಳಿಯಲ್ಲಿದ್ದು ರಾತ್ರಿಹೊತ್ತು ಬೆಳೆ ಹಾಳು ಮಾಡುತ್ತದೆ ಎಂದು ತಿಳಿಸಿದರು. ಈ ರೀತಿ ಸಮಸ್ಯೆಗೆ ಒಳಗಾಗಿರುವ ಬೆಳೆಯನ್ನು ಪರಿಶೀಲಿಸಿದ್ದು ಹತೋಟಿಗೆ ಮೇಲೆ ತಿಳಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಸತತ ಬರದಿಂದ ಕಂಗೆಟ್ಟ ರೈತ ಸಮುದಾಯ ಪ್ರಸಕ್ತ ವರ್ಷ ಮುಂಗಾರು ಮಳೆಯಾಗಿದ್ದರಿಂದ ಸಮಯಕ್ಕೆ ಸರಿಯಾಗಿ ಬಿತ್ತನೆ ಕಾರ್ಯ ಮಾಡಿದ್ದು, ಸದ್ಯ ಗೋವಿನ ಜೋಳದ ಬೆಳೆಗೆ ಸೈನಿಕ ಹುಳು ಕಾಣಿಸಿಕೊಂಡು ಬೆಳೆಯುತ್ತಿರುವ ಬೆಳೆಯನ್ನು ನಾಶಪಡಿಸುತ್ತಿದೆ.ಈಗ ಬೆಳೆಯುತ್ತಿರುವ ಬೆಳೆಗೆ ಒಂದಿಲ್ಲಾ ಒಂದು ರೋಗಗಳು ಬರುತ್ತಿರುವುದರಿಂದ ರೈತರು ಮತ್ತಷ್ಟು ಹೈರಾಣಾಗಿದ್ದಾರೆ. ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡು ರೈತರು ಆತಂಕಪಡುವಂತಾಗಿದೆ.