ಮಾನವನ ಜೀವನದಲ್ಲಿ ಗೋವು ಮತ್ತು ಕಲೆಗೆ ಅತ್ಯಂತ ಉನ್ನತ ಸ್ಥಾನವಿದೆ. ಅದರಂತೆ ಬೇಕಲ್‌ನ ಗೋಕುಲಂ ಗೋಶಾಲಾ ಪರಂಪರ ವಿದ್ಯಾಪೀಠಂ ಆವರಣ ಆ ಸ್ಥಾನವನ್ನು ನೀಡಿರುವುದು ಶ್ಲಾಘನೀಯ ಸೇವೆ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಧಾರ್ಮಿಕತೆ ಮತ್ತು ಹೈನುಗಾರಿಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ಗೋವನ್ನು ಮಾತೆಯ ಸ್ಥಾನದಲ್ಲಿ ಪೂಜಿಸಲಾಗುತ್ತದೆ. ಮಾನವನ ಜೀವನದಲ್ಲಿ ಗೋವು ಮತ್ತು ಕಲೆಗೆ ಅತ್ಯಂತ ಉನ್ನತ ಸ್ಥಾನವಿದೆ. ಅದರಂತೆ ಬೇಕಲ್‌ನ ಗೋಕುಲಂ ಗೋಶಾಲಾ ಪರಂಪರ ವಿದ್ಯಾಪೀಠಂ ಆವರಣ ಆ ಸ್ಥಾನವನ್ನು ನೀಡಿರುವುದು ಶ್ಲಾಘನೀಯ ಸೇವೆ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಗುರುವಾರ ಕಾಸರಗೋಡಿನ ಬೇಕಲ್‌ನ ಗೋಕುಲಂ ಗೋಶಾಲಾ ಪರಂಪರ ವಿದ್ಯಾಪೀಠಂನಲ್ಲಿ ಧೇನುಮಂಟಪಂ ನೂತನ ವೇದಿಕೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕತೆ, ಸಾಂಸ್ಕೃತಿಕತೆ, ಸಂಸ್ಕಾರದಿಂದ ನಮ್ಮ ಭಾರತ ನಿಂತಿದೆ. ವಿಷ್ಣು ಹೆಬ್ಬಾರ್-ಡಾ। ನಾಗರತ್ನ ಹೆಬ್ಬಾರ್ ದಂಪತಿ ಇಲ್ಲಿ ಗೋಶಾಲೆ ನಿರ್ಮಿಸಿ ಗೋವುಗಳನ್ನು ನೋಡಿಕೊಳ್ಳುವುದರ ಜೊತೆಗೆ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ. ಯುವಜನಾಂಗಕ್ಕೆ ಇಂತಹ ಧಾರ್ಮಿಕ, ಕಲಾತ್ಮತೆಯ ವಾತಾವರಣ ಸಿಕ್ಕಾಗ ಅವರು ನಮ್ಮ ಸಂಸ್ಕೃತಿಯಿಂದ ವಿಮುಖರಾಗದೇ ಅವರಿಂದ ಉತ್ತಮ ಸಮಾಜ ನೆಲೆಗೊಳ್ಳಲಿದೆ. ಮನಸ್ಸಿನ ಬೇಸರವನ್ನು ಕಲಾತ್ಮಕ ಕಾರ್ಯಕ್ರಮ ದೂರ ಮಾಡುತ್ತದೆ. ಮಕ್ಕಳಿಗೆ ಕಲೆ ಬಗ್ಗೆ ಆಸಕ್ತಿ ಬೆಳೆಸಿದಲ್ಲಿ ಅವರು ದುರಿತಗಳಿಂದ ದೂರ ಇರುತ್ತಾರೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಗೋಹತ್ಯೆ ನಿಷೇಧ ಕಾನೂನು ಜಾರಿ ಆಗಲಿ:
ಮಹಾತ್ಮ ಗಾಂಧೀಜಿ ಕೂಡ ಪ್ರಾಣಿ ಹಿಂಸೆ, ಗೋಹತ್ಯೆಯನ್ನು ವಿರೋಧಿಸಿದ್ದರು. ಗೋವನ್ನು ತಾಯಿಯ ಸ್ಥಾನದಲ್ಲಿ ಕಾಣುವ ಭಾರತದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು. ಈ ಬಗ್ಗೆ ಸರ್ಕಾರಗಳು ದೊಡ್ಡ ಮನಸ್ಸು ಮಾಡಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡುತ್ತವೆ ಎಂಬ ವಿಶ್ವಾಸ ನಮಗಿದೆ, ಅದು ಆದಷ್ಟು ಬೇಗ ಜಾರಿಯಾಗಲಿ ಎಂದು ಆಶಿಸಿದರು.ಬಳಿಕ, ಡಾ। ಪದ್ಮ ಸುಬ್ರಮಣ್ಯಂ ‘ವೈಶಾಖ ನಟನಮ್’ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 200ಕ್ಕೂ ಅಧಿಕ ಗೋವುಗಳನ್ನು ಸಲಹುತ್ತಾ ಸ್ವಾರ್ಥ ರಹಿತ ಸೇವೆಯನ್ನು ಹೆಬ್ಬಾರ್ ದಂಪತಿ ಮಾಡುತ್ತಿದ್ದಾರೆ. ಜೊತೆಗೆ ದೇಶದ ಕಲಾವಿದರಿಂದ ಗೋಶಾಲೆಯ ಮುಂದೆ ಕಲೆ ಪ್ರದರ್ಶನ ಇನ್ನೊಂದು ವಿಶೇಷ ಎಂದರು.
ಇಲ್ಲಿನ ಆವರಣ ಪ್ರವೇಶಿಸುತ್ತಲೇ ನಮ್ಮ ಮನಸ್ಸು ಶಾಂತವಾಗುತ್ತದೆ. ಗೋವುಗಳಿಗೂ, ಸಂಗೀತಕ್ಕೂ ಅವಿನಾಭಾವ ಸಂಬಂಧ ಇದೆ ಎನ್ನುವುದು ಪುರಾಣಗಳಿಂದ ತಿಳಿಯುತ್ತದೆ. ಕೇರಳ-ಕರ್ನಾಟಕ ಭಾಷಾ ಸಂಗಮ ಕ್ಷೇತ್ರದಲ್ಲಿ ಎರಡು ವೇದಿಕೆಗಳ ಮೂಲಕ ಪ್ರಸಿದ್ಧ ಕಲಾವಿದರು ಕಾರ್ಯಕ್ರಮ ನೀಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸುವ ಕಾರ್ಯಕ್ರಮದ ಮೂಲಕ ಭಾರತದ ಸಂಗಮವಾಗಿದೆ. ಇವರಿಗೆ ನಾವು, ಕೇರಳ-ಕರ್ನಾಟಕ ಸರ್ಕಾರ ಸಹಕಾರ, ಪ್ರೋತ್ಸಾಹ ನೀಡಬೇಕಿದೆ ಎಂದರು.ಸಂಸದ ರಾಜ್‌ಮೋಹನ್ ಉನ್ನಿತನ್, ಶಾಸಕ ಸಿ.ಕೆ.ಕುಂಞಂಬು, ಪೂರಕ್ಕಳಿ ಅಕಾಡೆಮಿ ಅಧ್ಯಕ್ಷ ಕೆ.ಕುಂನಿರಾಮನ್, ಎಂ.ಎಲ್.ಅಶ್ವಿನಿ, ವಿಜಯ್ ನೀಲಕಂಠನ್, ಸಂಸ್ಥೆಯ ವಿಷ್ಣು ಹೆಬ್ಬಾರ್ ಮತ್ತು ಡಾ। ನಾಗರತ್ನ ಹೆಬ್ಬಾರ್ ಇದ್ದರು.
----ರಾಷ್ಟ್ರೀಯ ನೃತ್ಯೋತ್ಸವಕ್ಕೆ ಚಾಲನೆ
ಡಾ। ಪದ್ಮ ಸುಬ್ರಹ್ಮಣ್ಯಂ ಅವರ ನೃತ್ಯ ಪ್ರದರ್ಶನದೊಂದಿಗೆ ವೈಶಾಖ ನಟನಮ್ ರಾಷ್ಟ್ರೀಯ ನೃತ್ಯೋತ್ಸವಕ್ಕೆ ಚಾಲನೆ ದೊರೆಯಿತು. ಸಭಾ ಕಾರ್ಯಕ್ರಮದ ಬಳಿಕ ಗಾಯಕ ವಿಜಯ್ ಪ್ರಕಾಶ್ ಅವರು ಧೇನು ಮಂಟಮದಲ್ಲಿ ಪ್ರಥಮ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಕಥಕ್ ನೃತ್ಯ ಜೋಡಿ ನಿರುಪಮಾ ಮತ್ತು ರಾಜೇಂದ್ರ ‘ಭಾವತರಂಗ’ ನೃತ್ಯ ರೂಪಕ ಪ್ರದರ್ಶಿಸಿದರು. ಬಳಿಕ ಡ್ರಮ್ಸ್ ಶಿವಮಣಿ ಅವರಿಂದ ಶಿವ ತರಂಗಮ್ ಕಾರ್ಯಕ್ರಮ ಪ್ರದರ್ಶನಗೊಂಡಿತು.