ಸಾರಾಂಶ
ಸಿಪಿಐ(ಎಂ) ತಾಲೂಕು ಸಮಿತಿಯ ಕಾರ್ಯದರ್ಶಿ ಸುಶೀಲಾ ಮಾತನಾಡಿ, ಕೃಷಿಕರು, ಕೂಲಿ ಕಾರ್ಮಿಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಸೇರಿದ ಸಿಪಿಐ(ಎಂ) ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಬೆಲೆ ಏರಿಕೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಎನ್.ಎಲ್.ಭರತ್ ರಾಜ್ ಮಾತನಾಡಿ, ಬಸ್ ದರ, ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಬಡವರ ಜೀವನದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಕೂಡಲೇ ಬಸ್ ದರ ಏರಿಕೆ ನಿರ್ಧಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ಸಾರಿಗೆ ಸೌಲಭ್ಯ ನೀಡುವ ಮೂಲಕ ಹಳ್ಳಿಯ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಸಿಪಿಐ(ಎಂ) ತಾಲೂಕು ಸಮಿತಿಯ ಕಾರ್ಯದರ್ಶಿ ಸುಶೀಲಾ ಮಾತನಾಡಿ, ಕೃಷಿಕರು, ಕೂಲಿ ಕಾರ್ಮಿಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಅಗತ್ಯ ವಸ್ತುಗಳು ಹಾಗೂ ಸಾರಿಗೆ ಬಸ್ ದರ ಏರಿಕೆ ವಾಪಸ್ ಪಡೆಯುವಂತೆ ಸಾರಿಗೆ ಬಸ್ ನಿಲ್ದಾಣದ ವ್ಯವಸ್ಥಾಪಕ ಮಧುಸೂದನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಲಿಂಗರಾಜಮೂರ್ತಿ, ಸುನಂದಾ, ರತ್ನಮ್ಮ, ಪ್ರೇಮಾ, ಕಮಲಮ್ಮ, ಸೌಮ್ಯ, ಟಿ.ಎಚ್. ಆನಂದ್, ಗುರುಸ್ವಾಮಿ, ಎಚ್.ಕೆ.ತಿಮ್ಮೇಗೌಡ, ಜಯಶೀಲಾ, ಶಿವಕುಮಾರ್, ಎ.ಎಲ್.ಶಿವಕುಮಾರ್, ಎಂ.ಶಿವರಾಮು, ಸತೀಶ್ ಸೇರಿ ಇತರರು ಇದ್ದರು.