ಪೆಟ್ರೋಲ್ ಬೆಲೆ ಏರಿಕೆ ತಕ್ಷಣ ವಾಪಸು ಪಡೆಯಲು ಸಿಪಿಐ(ಎಂ) ಆಗ್ರಹ
ಕನ್ನಡಪ್ರಭ ವಾರ್ತೆ ಕೋಲಾರಪೆಟ್ರೋಲ್ ಬೆಲೆ ಏರಿಕೆ ತಕ್ಷಣ ವಾಪಸು ಪಡೆಯಲು ಮತ್ತು ನೀಟ್ ಪರೀಕ್ಷೆ ಅಸಮರ್ಪಕವಾಗಿ ನಿರ್ವಹಿಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಕಾರಣರಾದ ಕೇಂದ್ರ ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿಯಿಂದ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಸಿಪಿಐ(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಎನ್.ಎನ್.ಶ್ರೀರಾಮ್ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಸಾಕಷ್ಟು ದಾಸ್ತಾನಿದೆ, ಜನ ಗಾಬರಿಗೊಳ್ಳಬೇಡಿ ಎಂದು ಯಾವ ಎಗ್ಗು ಸಿಗ್ಗಿಲ್ಲದೆ ಹೇಳುತ್ತಿದ್ದ ಮೋದಿ ಸರ್ಕಾರ, ಫಲಿತಾಂಶ ಬಂದೊಡನೆಯೇ ಎರಡು ಬಾರಿ ಪೆಟ್ರೋಲ್- ಡೀಸೆಲ್ ದರ ಏರಿಸಿ ಜನರ ಬೆನ್ನು ಮುರಿಯುವ ಕೆಲಸ ಮಾಡಿದೆ. ಇದಕ್ಕಿಂತ ದೊಡ್ಡ ಜನವಿರೋಧಿ ನಡೆ ಬೇರೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿವೆ. ಆದರೆ ಭಾರತದಲ್ಲಿ ಅಂತಹ ಕ್ರಮ ಕೈಗೊಳ್ಳದೆ, ದುಡಿಯುವ ಜನರ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹೆಚ್ಚಿಸುವುದೇ ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ಉದ್ದೇಶವಾಗಿದೆ. ಜನಹಿತಕ್ಕಿಂತ ಬಿಜೆಪಿಗೆ ಮತ್ತೆ ಮತ್ತೆ ಚುನಾವಣೆ ಗೆಲ್ಲುವುದೇ ಮುಖ್ಯ ಎಂಬುದು ಮತ್ತೊಮ್ಮೆ ರುಜುವಾತಾಗಿದೆ ಎಂದು ಆರೋಪಿಸಿದರು.ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೀಟ್ ಸೇರಿದಂತೆ ಹಲವು ಪ್ರಶ್ನೆ ಪತ್ರಿಕೆಗಳ ಸೋರಿಕೆ ಎಂಬುವುದು ಮಾಮೂಲಿಯಾಗಿದೆ. ಇದಕ್ಕೆ ಕೆಲವು ಶಿಕ್ಷಣ ಸಂಸ್ಥೆಗಳೊಂದಿಗೆ ಬಿಜೆಪಿಯು ಶಾಮೀಲಾಗಿರುವುದು ಕಾರಣ. ಇದಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್‌ರವರನ್ನು ವಜಾ ಮಾಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.ರಸಗೊಬ್ಬರದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ, ರಸಗೊಬ್ಬರ ಪಡೆಯಲು ಪ್ರೂಟ್ ಐಟಿ ಕಡ್ಡಾಯ ಮಾಡಿ ಪ್ರತಿ ಎಕರೆಗೆ ೨ ಮೂಟೆ ನೀಡುತ್ತಿರುವುದನ್ನು ಎನ್.ಎನ್.ಶ್ರೀರಾಮ್ ಟೀಕಿಸಿದರು. ರೈತರಿಗೆ ಅಗತ್ಯ ಇರುವಷ್ಟು ರಸಗೊಬ್ಬರವನ್ನು ಕಡಿಮೆ ಬೆಲೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ವಿಜಯಕೃಷ್ಣ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಕಳೆದ ೧೦ ವರ್ಷಗಳಿಂದ ೨೫ ರಿಂದ ೩೫ ಡಾಲರ್ ಮಧ್ಯೆ ದೊರೆಯುತ್ತಿದ್ದರೂ, ದೇಶದಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡದೇ ಜನರಿಂದ ೨೭.೬೧ ಲಕ್ಷ ಕೋಟಿ ರು.ಗಳನ್ನು ಹಗಲು ದರೋಡೆ ಮಾಡಲಾಯಿತು. ಅಲ್ಲದೇ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಮಾರಾಟ ಮಾಡುತ್ತಿದ್ದ ಇರಾನ್, ರಷ್ಯಾದಿಂದ ಖರೀದಿ ಮಾಡದಂತೆ ಅಮೇರಿಕಾದ ಬೆದರಿಕೆಗೆ ಮಣಿದು, ದುಬಾರಿ ಬೆಲೆಯಲ್ಲಿ ಅಮೇರಿಕಾ, ವೆನುಜುವೆಲ ದೇಶಗಳಿಂದ ಖರೀದಿ ಮಾಡಲಾಗುತ್ತಿದೆ. ಇದರಿಂದ ದೇಶದ ಜನತೆಯು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಇದಕ್ಕೆ ಪ್ರಧಾನಿ ಮೋದಿರವರ ಅಸಮರ್ಥ ಕಾರ್ಯನಿರ್ವಹಣೆಯೇ ಕಾರಣವಾಗಿದೆ ಎಂದು ಆರೋಪಿಸಿದೆ. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಮುಖಂಡರಾದ ಎಂ.ಭೀಮರಾಜ್, ವಿ.ಅಂಬರೀಶ್, ಎಸ್.ಆಶಾ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಹೆಚ್.ಬಿ.ಕೃಷ್ಣಪ್ಪ, ಅಪ್ಪಯ್ಯಣ, ಆಂಜನಮ್ಮ, ಚಿನ್ನಮ್ಮ, ನಾರಾಯಣಪ್ಪ, ಮುನಿರತ್ನಮ್ಮ ಇದ್ದರು.ಬೆಲೆ ಏರಿಕೆ ವಿರುದ್ಧ ಸಿಪಿಐಎಂ ಕೋಲಾರದಲ್ಲಿ ಪ್ರತಿಭಟನೆ
ಮೋದಿ ಸರ್ಕಾರ, ಫಲಿತಾಂಶ ಬಂದೊಡನೆಯೇ ಎರಡು ಬಾರಿ ಪೆಟ್ರೋಲ್- ಡೀಸೆಲ್ ದರ ಏರಿಸಿ ಜನರ ಬೆನ್ನು ಮುರಿಯುವ ಕೆಲಸ ಮಾಡಿದೆ. ಇದಕ್ಕಿಂತ ದೊಡ್ಡ ಜನವಿರೋಧಿ ನಡೆ ಬೇರೆ ಇಲ್ಲ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.