ಮಂಗಳೂರು: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ಎಲ್ಲ ಹಂತದ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸಲು, ಪ್ರಥಮ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸರ್ಕಾರಿ ಆಸ್ಪತ್ರೆಗಳನ್ನು ಅದಕ್ಕಾಗಿ ಗುರುತಿಸಿ, ಒಪ್ಪಂದದ ಆದೇಶ ಹೊರಡಿಸಿರುವುದನ್ನು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ. ಇದು ಸಾರ್ವಜನಿಕ ಆರೋಗ್ಯ ರಂಗವನ್ನು ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣಗೊಳಿಸುವ ಸರ್ಕಾರದ ನಡೆಯಾಗಿದೆ. ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದವನ್ನು ತಕ್ಷಣ ಕೈ ಬಿಡಬೇಕು, ವೈದ್ಯರು, ಔಷಧಿ ಸಹಿತ ಮೂಲಭೂತ ಸೌಲಭ್ಯಗಳನ್ನು ರಾಜ್ಯ ಸರ್ಕಾರದ ವತಿಯಿಂದಲೇ ಒದಗಿಸಿ ಸರ್ಕಾರಿ ಆಸ್ಪತ್ರೆಗಳನ್ನು ಬಲಗೊಳಿಸಬೇಕು. ಒಪ್ಪಂದ ಆದೇಶ ರದ್ದುಗೊಳಿಸುವ ವರೆಗೂ ತೀವ್ರ ಹೋರಾಟವನ್ನು ಸಂಘಟಿಸಲಿದೆ. ಮೇ 14 ರಂದು ಬೆಳಗ್ಗೆ 10.30 ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಒಪ್ಪಿಸುವ ಈ ಆದೇಶ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಲಿದೆ. ಆರೋಗ್ಯ ಕ್ಷೇತ್ರ ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣಗೊಳ್ಳುತ್ತದೆ. ವ್ಯಾಪಾರೀಕರಣ ತೀವ್ರಗೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರು, ಕಡಿಮೆ ಆದಾಯದವರು, ಕೆಳಮದ್ಯಮ ವರ್ಗಗಳು ಆರೋಗ್ಯ ಸೇವೆಯಿಂದ ಪೂರ್ಣಪ್ರಮಾಣದಲ್ಲಿ ವಂಚಿತರಾಗಲಿದ್ದಾರೆ. ಖಾಸಗಿಯವರ ಏಕಸ್ಬಾಮ್ಯಕ್ಕೆ ಇದು ಕಾರಣ ಆಗಲಿದೆ. ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣ, ಆಸ್ಪತ್ರೆಗಳ ಕಾರ್ಪೊರೇಟ್ ಲಾಬಿಗಳ ಹಿತಾಸಕ್ತಿಗೆ ಮಣಿದಿರುವುದು ಎದ್ದು ಕಾಣುತ್ತಿದೆ ಎಂದು ಅವರು ಆರೋಪಿಸಿದರು.
ಈಗ ಜಿಲ್ಲೆಯ ಮೂಡುಬಿದಿರೆ, ವಿಟ್ಲ ಸಮುದಾಯ ಆಸ್ಪತ್ರೆ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ಅಂತಿಮಗೊಂಡಿದೆ. ಖಾಸಗಿ ಗುಣಮಟ್ಟದ ಉತ್ತಮ ಸೇವೆ ಒದಗಿಸುವ ನೆಪಗಳನ್ನು ಮುಂದಿಡಲಾಗುತ್ತಿದೆ ಎಂದರು.ರಾಜ್ಯ ಸರ್ಕಾರ ತಕ್ಷಣವೇ ಪಿ.ಪಿ.ಪಿ ಮಾದರಿ ಈ ಖಾಸಗೀಕರಣದ ಒಪ್ಪಂದವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಬಲ ಜನ ಹೋರಾಟ ಸಂಘಟಿಸಲು ನಿರ್ಧರಿಸಿದೆ. ಈ ಹೋರಾಟ ಒಪ್ಪಂದದ ಆದೇಶವನ್ನು ಸರಕಾರ ಹಿಂಪಡೆಯುವವರಗೆ ಮುಂದುವರಿಯಲಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲಿದೆಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಸುಕುಮಾರ್ ತೊಕ್ಕೊಟು ಇದ್ದರು.
------------------------