ಸಾರಾಂಶ
ನಗರದ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ನಗರಸಭೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಹೊಸಪೇಟೆ: ನಗರದ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ( ಮಾರ್ಕ್ಸ್ ವಾದಿ ) ಪಕ್ಷದ ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ನಗರಸಭೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಹೊಸಪೇಟೆ ರಸ್ತೆ ಹಾಳಾಗಿದೆ. ಒಳಚರಂಡಿಯ ಮ್ಯಾನ್ ಹೋಲ್ ಗಳು, ನಗರದಲ್ಲಿ ಹಾದುಹೋಗುವ ಕಾಲುವೆಯ ಅಕ್ಕ ಪಕ್ಕದ ರಸ್ತೆ ದುರಸ್ತಿ ಮಾಡಬೇಕಿದೆ. ನಗರದ ಹೃದಯ ಭಾಗ ಮೂರು ಅಂಗಡಿ ಸರ್ಕಲ್‌ನಲ್ಲಿ ಕಾಲುವೆ ನೀರು ರಸ್ತೆಗೆ ಹರಿಯುತ್ತಿದ್ದು, ಇದರಿಂದ ಸ್ಥಳೀಯ ಜನ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ಈ ಭಾಗದಲ್ಲಿ ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯವಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.ನಗರದ ನಾಗಪ್ಪಕಟ್ಟೆ ಹತ್ತಿರವಿರುವ ಕಾಲುವೆ ಮತ್ತು ರಸ್ತೆ ತಡೆಗೋಡೆ ಇಲ್ಲದೆ ಜನರ ಜೀವ ಪಡೆಯಲು ಬಾಯ್ತೆರೆದು ಕುತ್ತಂತೆ ಕಾಣುತ್ತಿದೆ. ಈ ಭಾಗದಲ್ಲಿ ಶಾಲಾ, ಕಾಲೇಜುಗಳಿಗೆ ಹೋಗಿ ಬರುವ ಮಕ್ಕಳು ಹೆಚ್ಚಾಗಿದ್ದು, ಸಣ್ಣ ಮಕ್ಕಳ ಜೀವ ಕಾಪಾಡುವ ಹಿತದೃಷ್ಟಿಯಿಂದ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಹೊಸಪೇಟೆಯಲ್ಲಿ ಕೆಲವರ ನಿರ್ಲಕ್ಷ್ಯದಿಂದ ಮಕ್ಕಳ ಜೀವ ಪಡೆದಿರುವ ಆರೋಪ ಇದೆ. ಇಂತಹ ಸಂದರ್ಭದಲ್ಲಿ ಇನ್ನಷ್ಟು ಜೀವ ಬಲಿ ಪಡೆಯದೆ ತಕ್ಷಣ ತಡೆಗೋಡೆ ನಿರ್ಮಿಸಿ ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಗರದ ಎಲ್ಲ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಬಂದ ನಗರಸಭೆಯ ವ್ಯವಸ್ಥಾಪಕರು ಕೂಡಲೇ ನಿಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಎನ್. ಯಲ್ಲಾಲಿಂಗ, ಮುಖಂಡರಾದ ಎಂ. ಗೋಪಾಲ್, ವಿ. ಸ್ವಾಮಿ, ಕೆ.ಎಂ. ಸಂತೋಷ್ ಕುಮಾರ್, ರಮೇಶ್, ಹೇಮಂತ್ ನಾಯ್ಕ, ಎಸ್. ಶಂಕರ್ ಮತ್ತಿತರರಿದ್ದರು.