ಪಾಲಿಕೆ ಆಯುಕ್ತರ ವಜಾ ಆಗ್ರಹಿಸಿ ಸಿಪಿಎಂ ಕಾರ್ಯಕರ್ತರ ಮುತ್ತಿಗೆ, ಬಂಧನ

| Published : Jul 24 2024, 12:25 AM IST

ಪಾಲಿಕೆ ಆಯುಕ್ತರ ವಜಾ ಆಗ್ರಹಿಸಿ ಸಿಪಿಎಂ ಕಾರ್ಯಕರ್ತರ ಮುತ್ತಿಗೆ, ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆ ಕಚೇರಿಗೆ ನುಗ್ಗಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಿಪಿಐಎಂ ಪ್ರತಿಭಟನಾಕಾರರನ್ನು ಪೊಲೀಸರು ಬಲಪ್ರಯೋಗದಿಂದ ತಡೆದರು. ನಂತರ ರಸ್ತೆ ತಡೆ ಮಾಡಿದ್ದು, ಕೂಡಲೇ ಕಾರ್ಯಪ್ರವ್ರತ್ತರಾದ ಪೋಲಿಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಾಯುಕ್ತ ಕಾರ್ಯಾಚರಣೆ ವೇಳೆ ಅಕ್ರಮ ಆಸ್ತಿ ಸಂಪಾದನೆ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರನ್ನು ಕೂಡಲೇ ವಜಾಗೊಳಿಸುವಂತೆ ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರು ಮಂಗಳವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಭ್ರಷ್ಟ ಲೂಟಿಕೊರ ಆಯುಕ್ತರು ತೊಲಗಲೇಬೇಕೆಂದು ಸೇರಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ ಇಮ್ತಿಯಾಜ್, ಪಾಲಿಕೆ ಆಯುಕ್ತರು ಸ್ಮಾರ್ಟ್ ಸಿಟಿ ಸಹಿತ ಇತರೆ ಯೋಜನೆಯ ನೂರಾರೂ ಕೋಟಿ ರು. ಅನುದಾನವನ್ನು ನಗರದ ಅಭಿವೃದ್ಧಿಗೆ ಬಳಸುವ ಬದಲಾಗಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಲೋಕಾಯುಕ್ತ ಬಲೆಗೆ ಬಿದ್ದ ಆಯುಕ್ತರನ್ನು ಬಂಧಿಸದೆ ಇರಲು ಪಾಲಿಕೆ ಆಡಳಿತ ಬಿಜೆಪಿ, ಶಾಸಕರು ಹಾಗೂ ರಾಜ್ಯ ಸರ್ಕಾರ ಶಾಮೀಲಾಗಿದೆ. ಆಯುಕ್ತರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಸ್ವತಃ ಆಯುಕ್ತರು ಅಕ್ರಮ ಆಸ್ತಿ ಸಂಪಾದನೆ ಮಾಡುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಅಗಿದೆ. ಕೋಟ್ಯಂತರ ಬೆಲೆ ಬಾಳುವ ಮೂರು ಮನೆಗಳನ್ನು ಹೊಂದಿರುವ ಈ ಭ್ರಷ್ಟ ಆಯುಕ್ತರಿಗೆ ತನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಒಂದು ತುಂಡು ನಿವೇಶನ ನೀಡಲು ಸಾಧ್ಯವಾಗಿಲ್ಲ ಎಂದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಸ್ತಾವಿಕ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ, ಮಹಿಳಾ ಮುಖಂಡರಾದ ಪ್ರಮೀಳಾ ದೇವಾಡಿಗ, ಅಸುಂತ ಡಿಸೋಜಾ, ಯೋಗಿತಾ ಉಳ್ಳಾಲ, ಮುಖಂಡರಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಇಬ್ರಾಹಿಂ ಜೆಪ್ಪು ಮತ್ತಿತರರಿದ್ದರು.

ಪಾಲಿಕೆ ಕಚೇರಿಗೆ ನುಗ್ಗಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಿಪಿಐಎಂ ಪ್ರತಿಭಟನಾಕಾರರನ್ನು ಪೊಲೀಸರು ಬಲಪ್ರಯೋಗದಿಂದ ತಡೆದರು. ನಂತರ ರಸ್ತೆ ತಡೆ ಮಾಡಿದ್ದು, ಕೂಡಲೇ ಕಾರ್ಯಪ್ರವ್ರತ್ತರಾದ ಪೋಲಿಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.