ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ವ್ಯಾಪ್ತಿಯಲ್ಲಿ ಶಂಕಿತ , ಖಚಿತ ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರು ನಿರ್ಲಕ್ಷ ಮಾಡದೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಬೇಲೂರು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಉಷಾ ಕೆ.ಎಸ್. ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಹ್ಯಕ್ಕಯಣ್ಣ ಕುಮಾರ್ ಪಟ್ಟಣದ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಉಷಾ ಕೆಎಸ್ ರವರು, ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಡೆಂಘೀ ಜ್ವರದ ಕುರಿತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮ ಮಟ್ಟದಲ್ಲಿ ಮತ್ತು ನಗರ ಪ್ರದೇಶದಲ್ಲಿ ಕರಪತ್ರಗಳನ್ನು ವಿತರಿಸಿ ಆರೋಗ್ಯ ಶಿಕ್ಷಣವನ್ನು ನೀಡಿ ಪ್ರತಿ ದಿನ ಲಾರ್ವಾ ಸಮೀಕ್ಷೆ ಮತ್ತು ಜ್ವರದ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಹಾಗೂ ಸರ್ಕಾರದ ಆದೇಶದಂತೆ ಪ್ರತೀ ಶುಕ್ರವಾರ ಬೇಲೂರು ನಗರದ ಲಾರ್ವಾ ಸಮೀಕ್ಷೆ ನಡೆಸಲು ತಾಲೂಕಿನ ಕ್ಷೇತ್ರ ಸಿಬ್ಬಂದಿ ಮತ್ತು ನಗರದ ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗುತ್ತಿದೆ ಎಂದರು.
ಡೆಂಘೀ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ಈ ರೋಗದ ಪ್ರಮುಖ ಲಕ್ಷಣಗಳು. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.ಆರೋಗ್ಯ ನಿರೀಕ್ಷಣಾಧಿಕಾರಿ ಹಕ್ಯಣ್ಣ ಕುಮಾರ್ ಮಾತನಾಡಿ, ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು. ಮತ್ತು ನಮ್ಮ ಮನೆಗಳ ಅಕ್ಕಪಕ್ಕ ಸ್ವಯಂ ಪ್ರೇರಿತರಾಗಿ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮತ್ತು ನಮ್ಮ ಮನೆಗಳಿಂದ ಸಂಗ್ರಹವಾದ ಕಸವನ್ನು ಅಕ್ಕಪಕ್ಕದ ಖಾಲಿ ಸೈಟ್‌ಗಳಲ್ಲಿ ಬಿಸಾಡದೆ ಪುರಸಭೆಯ ಕಸದ ವಾಹನಗಳಿಗೆ ನೀಡಬೇಕು. ಸಾರ್ವಜನಿಕರು ಪೌರ ಕಾರ್ಮಿಕರ ಜೊತೆ ಸಹಕರಿಸಿದಾಗ ಮಾತ್ರ ಇಂತಹ ಕಾಯಿಲೆಗಳು ನಿಯಂತ್ರಿಸಬಹುದು ಎಂದರು.
ಬೇಲೂರು ಪುರಸಭೆ ಹಾಗೂ ತಾಲೂಕಾ ಆರೋಗ್ಯ ಇಲಾಖೆಗಳು ಡೆಂಘೀ ಕುರಿತು ಸಾರ್ವಜನಿಕರಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿ, ಇದರ ಜೊತೆ ಅವಶ್ಯಕತೆ ಇರುವ ವಾರ್ಡ್‌ಗಳಿಗೆ ಫಾಗಿಂಗ್ ಹಾಗೂ ಬ್ಲೀಚಿಂಗ್ ಕಾರ್ಯಗಳನ್ನು ವಾರಕ್ಕೆ ಮೂರು ಬಾರಿಯಾದರೂ ಸತತವಾಗಿ ನಡೆಸಬೇಕು ಎಂದು ಗುಲ್ ರೀಸ್ ಪಾಷ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಉಷಾ ಆರೋಗ್ಯ ಹಿರಿಯ ನಿರಕ್ಷಣಾಧಿಕಾರಿಯದ ದಯಾನಂದ್, ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಪುರಸಭೆ ಸದಸ್ಯ ಅಕ್ರಮ್ ಪಾಷಾ,ಪೇಟೆ ಜಾಮಿಯ ಮಸೀದಿಯ ಗುರುಗಳಾದ ಸುಭಾನ್, ಪೇಟೆ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಅಸ್ಲಾಂ ಪಾಷಾ ಹಾಗೂ ಸ್ಥಳೀಯರು ಹಾಜರಿದ್ದರು.