ಸಾರಾಂಶ
ಸುರಪುರ ನಗರದ ತಾಪಂ ಸಭಾಂಗಣದಲ್ಲಿ ನರೇಗಾ ಯೋಜನೆ ಅನುಷ್ಠಾನದ ಕುರಿತು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಗರಿಮಾ ಪನ್ವಾರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸುರಪುರ
ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ನರೇಗಾದಡಿ ಮಾನವ ದಿನಗಳನ್ನು ಗ್ರಾಪಂ ಮಟ್ಟದಲ್ಲಿ ಸೃಜಿಸಿಕೊಟ್ಟು ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮನರೇಗಾ ಯೋಜನೆ ಅನುಷ್ಠಾನದ ಕುರಿತ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನರೇಗಾ ತಂತ್ರಾಂಶದಲ್ಲಿ 2023-24ರ ಹಳೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದರು.
ಕೂಲಿ ಕಾರ್ಮಿಕರಾಗಿ ಜಿಯೋ ಟ್ಯಾಗ್, ಎನ್‌ಎಂಎಂಎಸ್ ಆ್ಯಪ್ ಸದ್ಭಳಕೆ ಮಾಡಿಕೊಳ್ಳಬೇಕು. ಶೂನ್ಯ ಎನ್‌ಎಂಆರ್ ತೆಗೆದು ಕೆಲಸ ನೀಡಬೇಕು. ಕೂಲಿ ಕಾರ್ಮಿಕರಿಂದ ನಮೂನೆ 6 ಸ್ವೀಕರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ನರೇಗಾದಡಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಸಮಯಕ್ಕೆ ಸರಿಯಾಗಿ ವೇತನವನ್ನು ಕೂಲಿ ಕಾರ್ಮಿಕರ ಖಾತೆಗೆ ಜಮೆ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಗ್ರಾಪಂ ಗಳಲ್ಲಿ ಕೂಸಿನ ಮನೆ ಆರಂಭಿಸಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಕೇರ್ ಟೇಕರ್ ನರೇಗಾದಡಿ ನೇಮಿಸಿಕೊಳ್ಳಲಾಗಿದೆ. ಅವರಿಗೆ ಸರಿಯಾಗಿ ಎನ್‌ಎಂಆರ್ ತೆಗೆದು ಅವರಿಗೆ ವೇತನ ಪಾವತಿ ಆಗುವಂತೆ ಕಾಳಜಿವಹಿಸಬೇಕು. ನರೇಗಾ ಚೆಕ್‌ಲಿಸ್ಟ್ ಪ್ರಕಾರ ಕಾಮಗಾರಿಗಳ ಕಡತ ನಿರ್ವಹಣೆ ಮಾಡಿ ಕಚೇರಿಗಳಲ್ಲಿ ಕಾಯ್ದಿರಿಸಬೇಕು ಎಂದರು. ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ್, ಸುರಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಹುಣಸಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಿರೇಮಠ, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರರೆಡ್ಡಿ ಇತರರಿದ್ದರು.