ಶೇ.85ಕ್ಕೂ ಅಧಿಕ ಮತದಾನದಿಂದ ದಾಖಲೆ ಸೃಷ್ಟಿಸಿ

| Published : Mar 28 2024, 12:49 AM IST

ಶೇ.85ಕ್ಕೂ ಅಧಿಕ ಮತದಾನದಿಂದ ದಾಖಲೆ ಸೃಷ್ಟಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಈ ಬಾರಿ ಶೇ.85ಕ್ಕಿಂತಲೂ ಹೆಚ್ಚಿನ ಮತದಾನ ಆಗುವಂತೆ ನೋಡಿಕೊಂಡು, ಹೊಸ ದಾಖಲೆ ಬರೆಯಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್‌ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.

- ರಾಜ್ಯ ಸ್ವೀಪ್‌ ನೋಡಲ್‌ ಅಧಿಕಾರಿ ಪಿ.ಎಸ್‌. ವಸ್ತ್ರದ್‌ ಸೂಚನೆ । ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಈ ಬಾರಿ ಶೇ.85ಕ್ಕಿಂತಲೂ ಹೆಚ್ಚಿನ ಮತದಾನ ಆಗುವಂತೆ ನೋಡಿಕೊಂಡು, ಹೊಸ ದಾಖಲೆ ಬರೆಯಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್‌ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಸ್ವೀಪ್ ಸಮಿತಿಯ ಕೋರ್ ಕಮಿಟಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾವಣಗೆರೆ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.72.96 ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಯಲ್ಲಿ ಯಾವ ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗಿದೆಯೋ, ಅಂತಹ ಪ್ರದೇಶದಲ್ಲಿ ಹೆಚ್ಚಿನ ಮತದಾರರ ಜಾಗೃತಿ ಕಾರ್ಯಕ್ರಮದ ಜೊತೆಗೆ ಅವರಿಗೆ ಆಗಿರುವ ಅನಾನುಕೂಲಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಕಡಿಮೆ ಮತದಾನವಾಗಲು ಯಾವ ಯಾವ ಅಂಶಗಳು ಕಾರಣವಾಗಿವೆ ಎಂಬುದನ್ನು ಮನಗಂಡು, ಪರಿಹಾರೋಪಾಯಗಳನ್ನು ಕಂಡುಕೊಂಡು, ಮತದಾನ ಹೆಚ್ಚಳಕ್ಕೆ ಶ್ರಮಿಸಬೇಕು ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಹೆಚ್ಚಿರುತ್ತದೆ. ಆದರೆ ನಗರ, ಪಟ್ಟಣ ಪ್ರದೇಶದ ಕೆಲವು ಪ್ರದೇಶಗಳು ಅಂದರೆ ಶಿಕ್ಷಣವಂತರೇ ಮತದಾನದಿಂದ ದೂರ ಇರುತ್ತಾರೆ. ಚುನಾವಣಾ ಫಲಿತಾಂಶದಲ್ಲಿ ಒಂದು ಮತದಾನದಿಂದ ವಿಜೇತರಾದವರು ಮತ್ತು ಒಂದು ಮತ ಕಡಿಮೆ ಆಗಿದ್ದರಿಂದ ಸರ್ಕಾರದ ಪತನಕ್ಕೂ ಕಾರಣ ಆಗಿರುವುದನ್ನು ಕಾಣುತ್ತೇವೆ. ಆದ್ದರಿಂದ ಪ್ರತಿಯೊಬ್ಬರ ಮತವು ಬಹಳ ಮುಖ್ಯವಾಗಿದೆ. ಎಲ್ಲರೂ ಚುನಾವಣಾ ಹಬ್ಬದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕಿದೆ ಎಂದು ಹೇಳಿದರು.

ಮತಗಟ್ಟೆ ಸೌಲಭ್ಯಗಳ ಕಡೆಗೂ ಗಮನಹರಿಸಿ:

ಮತಗಟ್ಟೆಗೆ ಜನರು ಖುಷಿಯಿಂದ ಬಂದು ಮತದಾನ ಮಾಡುವಂತಹ ವಾತಾವರಣ ಕಲ್ಪಿಸಬೇಕು. ಮತಗಟ್ಟೆಗಳಲ್ಲಿ ಜನರಿಗೆ ಕನಿಷ್ಠ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ದಾವಣಗೆರೆ ನಗರದ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿಯವರು ಸಹ ಎಲ್ಲ ಮತದಾರರ ವಿವರ ಸಂಗ್ರಹ ಮಾಡಿರುವುದನ್ನು ಗಮನಿಸಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ವಹಿ ನಿರ್ವಹಿಸುವ ಮೂಲಕ ಎಲ್ಲ ಮಾಹಿತಿ ಸಂಗ್ರಹ ಮಾಡಿ, ಮತದಾರರೊಂದಿಗೆ ಸಂಪರ್ಕ ಹೊಂದಬೇಕು. ಇದು ಸಹ ಮತದಾನ ಹೆಚ್ಚಳಕ್ಕೆ ಪೂರಕ ಅಂಶವಾಗಿದೆ ಎಂದರು.

ಇಲಾಖಾವಾರು ಕಾರ್ಯಕ್ರಮ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ಮೂರು ತಲೆಮಾರಿನ ಮತದಾರರಿಂದ ಮತದಾನ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ಮತದಾರರ ಜಾಗೃತಿಗೆ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು. ಜಂಟಿ ಕೃಷಿ ನಿರ್ದೇಶಕರು ಮತದಾರರ ಜಾಗೃತಿಗೆ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ ಮತ್ತು ಆರೋಗ್ಯ ಇಲಾಖೆಯಿಂದ ಮೇ 7ರಂದು ಮತದಾನ ಮಾಡಲು ಚಿಕಿತ್ಸೆ, ತಪಾಸಣೆಗೆ ಆಗಮಿಸುವ ಎಲ್ಲ ರೋಗಿಗಳು, ಜೊತೆಯಲ್ಲಿ ಬರುವವರಿಗೂ ಮತದಾನ ಜಾಗೃತಿ ಮೂಡಿಸಲಾಗುತ್ತದೆ. ಹಾಸ್ಟೆಲ್‌ನಲ್ಲಿ ಇರುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಅಧಿಕಾರಿಗಳು ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಮುಖ್ಯ ಯೋಜನಾಧಿಕಾರಿ ಮಲ್ಲ ನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಂತೇಶ್ ಹಾಗೂ ಸಮಿತಿ ಸದಸ್ಯರಾದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- - -

ಬಾಕ್ಸ್‌ ಹೊಸ ಮತದಾರರ ನೋಂದಣಿ ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಅಗತ್ಯ ಎಲ್ಲ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. 18 ವರ್ಷ ತುಂಬಿರುವ ಯುವ ಮತದಾರರು ಯಾರು ಬಿಟ್ಟು ಹೋಗಬಾರದೆಂದು ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮ ರೂಪಿಸುವ ಮೂಲಕ ಮತ್ತು ಸಂವಾದ ನಡೆಸುವ ಮೂಲಕ 36 ಸಾವಿರಕ್ಕಿಂತ ಹೆಚ್ಚು ಹೊಸ ಮತದಾರರನ್ನು ನೋಂದಣಿ ಮಾಡಿಸಲಾಗಿದೆ ಎಂದರು.

- - - -27ಕೆಡಿವಿಜಿ31ಃ:

ದಾವಣಗೆರೆ ಜಿಪಂ ಸಭಾಂಗಣದಲ್ಲಿಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಕೋರ್ ಕಮಿಟಿ ಸಭೆ ನಡೆಯಿತು.