ಕಣ್ಣಿನ ತೊಂದರೆಗಳ ಬಗ್ಗೆ ಜಾಗೃತಿಯಾಗಲಿ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Mar 25 2025, 12:46 AM IST

ಕಣ್ಣಿನ ತೊಂದರೆಗಳ ಬಗ್ಗೆ ಜಾಗೃತಿಯಾಗಲಿ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ವಿಶ್ವ ಆಪ್ಟೊಮೆಟ್ರಿ ದಿನ ಆಯೋಜಿಸಲಾಗಿತ್ತು.

ಹುಬ್ಬಳ್ಳಿ: ಕಣ್ಣಿನ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆಪ್ಟೊಮೆಟ್ರಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಕಣ್ಣಿನ ಸಮಸ್ಯೆಗೆ ವಯಸ್ಸಿನ ಬೇಧವಿಲ್ಲ. ಆಧುನಿಕ ತಂತ್ರಜ್ಞಾನ ಇದ್ದಾಗಲೂ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಮಸ್ಯೆ ಕಾಡುತ್ತಿದೆ. ಕಣ್ಣಿನ ಪ್ರತಿಯೊಂದು ಸಮಸ್ಯೆಗೆ ಎಂ.ಎಂ. ಜೋಶಿ ಆಸ್ಪತ್ರೆ ಪರಿಹಾರ ಒದಗಿಸಲು ಸಿದ್ಧವಾಗಿರುವುದು ಹಾಗೂ ಕರ್ನಾಟಕವನ್ನು ಅಂಧತ್ವ ಮುಕ್ತ ಮಾಡಲು ಪಣ ತೊಟ್ಟಿರುವುದು ಶ್ಲಾಘನೀಯ ಎಂದರು.

ಡಾ. ಎಂ.ಎಂ. ಜೋಶಿ ಅವರು 90 ವರ್ಷ ವಯೋಮಾನದವರಾದರೂ ಆರೋಗ್ಯವಾಗಿದ್ದಾರೆ. ಇದಕ್ಕೆ ಅವರು ಸಮಾಜಮುಖಿಯಾಗಿ ಕೆಲಸ ಹಾಗೂ ಚಿಂತನೆ ಮಾಡುತ್ತಿರುವುದೇ ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಆಸ್ಪತ್ರೆ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ರಾಜ್ಯಾದ್ಯಂತ ದೃಷ್ಟಿಕೇಂದ್ರಗಳನ್ನು ತೆರೆಯಲಾಗುತ್ತಿದೆ. ನಮ್ಮ ಉದ್ದೇಶ ಅನಗತ್ಯ ಅಂಧತ್ವ ನಿವಾರಣೆ ಮಾಡುವುದು. ಇದಕ್ಕೆ ಸಂಘ-ಸಂಸ್ಥೆಗಳು, ಸರಕಾರ ಕೈ ಜೋಡಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಸಂಸ್ಥೆಯ ಚೇರಮನ್‌ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕರಾದ ಡಾ. ಎ.ಎಸ್‌. ಗುರುಪ್ರಸಾದ, ಡಾ. ಕೃಷ್ಣಪ್ರಸಾದ ಆರ್‌., ಎಂ.ಎಂ. ಜೋಶಿ ಕಣ್ಣಿನ ಸಂಸ್ಥೆಯ ಆಪ್ಟೊಮೆಟ್ರಿ ಕಾಲೇಜ್‌ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ಕೋರಿ, ಉಪನ್ಯಾಸಕ ಪ್ರದೀಪ ಬಿ.ವಿ., ಸೇರಿದಂತೆ ಅನೇಕರು ಇದ್ದರು.