ತಂಬಾಕು ಉತ್ಪನ್ನ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ: ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್

| Published : Jul 14 2024, 01:33 AM IST

ತಂಬಾಕು ಉತ್ಪನ್ನ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ: ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್
Share this Article
  • FB
  • TW
  • Linkdin
  • Email

ಸಾರಾಂಶ

ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು.

ಬಳ್ಳಾರಿ: ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರವೂ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ತಿಳಿಸಿದರು.

ನಗರದ ಹೊಸ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಗಡಿ, ಹೋಟೆಲ್, ಬೇಕರಿ, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಇತರೇ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕೋಟ್ಪಾ ಕಾಯ್ದೆಗೆ ಸಂಬಂಧಿಸಿದ ನಾಮಫಲಕಗಳನ್ನು ಹಾಕಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು. ನಾಮಫಲಕ ಹಾಕದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 1308 ಶಾಲೆಗಳಲ್ಲಿ 1267 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದ 41 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳಾಗಿ ಘೋಷಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲೆಯ 75 ಪದವಿ ಪೂರ್ವ ಕಾಲೇಜುಗಳ ಪೈಕಿ 62 ಕಾಲೇಜುಗಳಲ್ಲಿ ಸೆಕ್ಷನ್-4 ಮತ್ತು ಸೆಕ್ಷನ್-6ಬಿ ನಾಮಫಲಕಗಳು ಅಳವಡಿಸಲಾಗಿದ್ದು, ಬಾಕಿ ಉಳಿದ ಕಾಲೇಜುಗಳಲ್ಲಿ ಈ ಕೂಡಲೇ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಿಡಿಪಿಯುಗೆ ಸೂಚಿಸಿದರು.

ಜಿಲ್ಲೆಯಲ್ಲಿ ಆಹಾರ ಮಾರಾಟಕ್ಕೆ ಸಂಬಂಧಿಸಿದಂತೆ 2093 ಪರವಾನಗಿ ಪಡೆದ ಅಂಗಡಿ, ಬೇಕರಿ, ಹೋಟೆಲ್‍ಗಳಿದ್ದು, ಅವುಗಳಲ್ಲಿ 1407 ಸೆಕ್ಷನ್ - 4 ನಾಮಫಲಕ ಅಳವಡಿಸಲಾಗಿದೆ. ಬಾಕಿ ಉಳಿದ 686 ಸ್ಥಳಗಳಲ್ಲಿ ನಾಮಫಲಕ ಅಳವಡಿಸಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಲ್ಲಿ ಹಾಗೂ ಗ್ರಾಮಗಳಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಲಾಗಿದ್ದು, ನಿಮಮಾನುಸಾರ ಸಭೆ ನಡೆಸಿ ಕೋಟ್ಪಾ-2003ರ ಸೆಕ್ಷನ್ 4,5,6ಎ ಮತ್ತು 7ರ ಅನುಷ್ಠಾನಗೊಳಿಸಬೇಕು ಹಾಗೂ ಕಾರ್ಯಾಚರಣೆ ನಡೆಸಿ ದಂಡ ಸಂಗ್ರಹಿಸುವಂತೆ ಅವರು ಸೂಚಿಸಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದ್ದು, ಕಡಿವಾಣ ಹಾಕಬೇಕು ಮತ್ತು ದಂಡ ವಿಧಿಸಬೇಕು ಎಂದು ಕೆಕೆಆರ್‍ಟಿಸಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳ ಮೈಕ್ ಮೂಲಕ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ಪರಿಣಾಮ ಕುರಿತು ಪ್ರಚಾರ ನೀಡಬೇಕು ಎಂದು ತಿಳಿಸಿದರು.

ಕೋಟ್ಪಾ ಕಾಯ್ದೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಡಿಎಚ್‌ಒ ಡಾ.ವೈ.ರಮೇಶ್‍ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.