ಗೃಹಲಕ್ಷ್ಮೀ ಸೌಲಭ್ಯ ಪಡೆಯಲು ಮಹಿಳೆಯರಲ್ಲಿ ಅರಿವು ಮೂಡಿಸಿ: ಕೃಷ್ಣಮೂರ್ತಿ

| Published : Nov 23 2024, 12:34 AM IST

ಗೃಹಲಕ್ಷ್ಮೀ ಸೌಲಭ್ಯ ಪಡೆಯಲು ಮಹಿಳೆಯರಲ್ಲಿ ಅರಿವು ಮೂಡಿಸಿ: ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಡಿಪಿಒ ಇಲಾಖೆ ಕಟ್ಟಡ, ನಗರಸಭೆಯಲ್ಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು. ಪುತ್ತೂರಿನಲ್ಲಿ ಯುಜಿಡಿ ಯೋಜನೆ ಬೇಡಿಕೆಗೆ ಸಂಬಂಧಿಸಿದಂತೆ ಶಾಸಕರಲ್ಲಿ ಮಾತುಕತೆ ನಡೆಸಲಾಗುವುದು. ಉಪ್ಪಿನಂಗಡಿಯಲ್ಲಿ ಯುಜಿಡಿಗೆ ಸಂಬಂಧಿಸಿ ಪ್ರಯತ್ನ ನಡೆಸಲಾಗುವುದು ಎಂದು ಕೃಷ್ಣಮೂರ್ತಿ ಅವರು ಸಭೆಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ ಗ್ಯಾರಟಿ ಯೋಜನೆಗಳು, ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಮಗಾರಿಗಳು, ಇಲಾಖೆಗಳು ಕೈಗೊಂಡಿರುವ ಕ್ರಮಗಳು, ಬಾಕಿ ಇರುವ ಕೆಲಸಗಳ ಬಗ್ಗೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಸರ್ಕಾರದ ನೋಡಲ್‌ ಅಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಶುಕ್ರವಾರ ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಗೆ ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ೪೦ ಸಾವಿರ ಗುರಿ ನಿಗದಿಪಡಿಸಲಾಗಿದ್ದು, ಈ ಪೈಕಿ ೩೬,೬೯೧ ಮಂದಿ ಫಲಾನುಭವಿಗಳಾಗಿ ಸೌಲಭ್ಯ ಪಡೆಯುತ್ತಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಉಳಿದವರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಸಿಡಿಪಿಒ ತಿಳಿಸಿದರು. ಇದಕ್ಕೆ ಉತ್ತರಿಸಿದ ಕೃಷ್ಣಮೂರ್ತಿ, ಗೃಹಲಕ್ಷ್ಮೀ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಮಹಿಳೆಯರಿಗೆ ಒಂದಷ್ಟು ಆರ್ಥಿಕ ಶಕ್ತಿ ಲಭಿಸುತ್ತದೆ. ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನೀಡಿದರೆ ಅದು ಗೌಪ್ಯವಾಗಿರುತ್ತದೆ ಮತ್ತು ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ಅರಿವನ್ನು ಫಲಾನುಭವಿಗಳಿಗೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳೂ ಸಹಕಾರ ನೀಡಬೇಕು ಎಂದರು.

ಪುತ್ತೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ೭ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ೯ ವಸತಿನಿಲಯಗಳಿವೆ. ಇದಕ್ಕೆ ಸಂಬಂಧಿಸಿದಂತೆ ಬಿಇಒ, ಸಿಡಿಪಿಒ, ಅಕ್ಷರದಾಸೋಹದ ಅಧಿಕಾರಿಗಳು ನೋಡೆಲ್ ಅಧಿಕಾರಿಗಳಾಗಿದ್ದಾರೆ. ಇವುಗಳಲ್ಲಿ ಕಟ್ಟಡಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ ಎಂದು ಮಾಹಿತಿ ನೀಡಲಾಯಿತು. ಮಾಹಿತಿ ಪಡೆದುಕೊಂಡ ಕೃಷ್ಣಮೂರ್ತಿ ಅವರು ವಿದ್ಯಾರ್ಥಿನಿಯಗಳು ಸ್ವಚ್ಛವಾಗಿ ಮತ್ತು ಆರೋಗ್ಯಕರ ವಾತಾವರಣವನ್ನು ಹೊಂದಿರಬೇಕು. ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು. ಬಿಇಒಗೆ ವಾಹನವಿಲ್ಲ: ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪುತ್ತೂರು ಹಾಗೂ ಕಡಬ ತಾಲೂಕು ವ್ಯಾಪ್ತಿಯ ಜವಾಬ್ದಾರಿ ಇದೆ. ಆದರೆ ಕರ್ತವ್ಯದ ನೆಲೆಯಲ್ಲಿ ಓಡಾಡಲು ವಾಹನದ ವ್ಯವಸ್ಥೆ ಇಲ್ಲ. ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಹಣಕಾಸು ಕೊರತೆ ಇದೆ ಎಂದು ನೋಡೆಲ್ ಅಧಿಕಾರಿಯವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು. ಪುತ್ತೂರು ಹಾಗೂ ಕಡಬ ತಾಲೂಕು ವ್ಯಾಪ್ತಿಯಲ್ಲಿ ೨೧೭ ಅಂಗನವಾಡಿ ಕೇಂದ್ರಗಳಿದ್ದು, ೨೧೫ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದೆ. ಇನ್ನು ೨ ಕಟ್ಟಡಗಳಿಗೆ ಮಂಜೂರಾತಿ ಆಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಜನಸಂಖ್ಯೆ ಆಧಾರದಲ್ಲಿ ಪುತ್ತೂರಿಗೆ ಹೆಚ್ಚುವರಿ ೧ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೇಳಿದ್ದೇವೆ. ಹಿರೆಬಂಡಾಡಿಯಲ್ಲಿ ಅದಕ್ಕೆ ೮೧ ಸೆಂಟ್ಸ್ ಜಾಗವನ್ನು ಗುರುತಿಸಿ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಮುಂದಿನ ಪ್ರಗತಿ ಆಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ೧೮ ಬಿಪಿಎಲ್ ಕಾರ್ಡ್ ರದ್ದು: ಪುತ್ತೂರು ತಾಲೂಕಿನಲ್ಲಿ ೨೫,೩೫೩ ಬಿಪಿಎಲ್ ಹಾಗೂ ೨೧,೦೩೬ ಎಪಿಎಲ್ ಕಾರ್ಡುದಾರರಿದ್ದಾರೆ. ಬಿಪಿಎಲ್ ಅನರ್ಹತೆಗೆ ಸಂಬಂಧಿಸಿದಂತೆ ತೆರಿಗೆ ಪಾವತಿದಾರ ೩೭೨ ಪಡಿತರ ಚೀಟಿಗಳ ಲಿಸ್ಟ್ ಬಂದಿದೆ. ಸದ್ಯಕ್ಕೆ ೧೮ ಬಿಪಿಎಲ್ ಕಾರ್ಡುಗಳು ರದ್ದಾಗಿದ್ದು, ಉಳಿದಂತೆ ಪರಿಶೀಲನೆಯಲ್ಲಿದೆ ಎಂದು ಆಹಾರ ಇಲಾಖೆಯ ಸರಸ್ವತಿ ಮಾಹಿತಿ ನೀಡಿದರು.

ಸಿಡಿಪಿಒ ಇಲಾಖೆ ಕಟ್ಟಡ, ನಗರಸಭೆಯಲ್ಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು. ಪುತ್ತೂರಿನಲ್ಲಿ ಯುಜಿಡಿ ಯೋಜನೆ ಬೇಡಿಕೆಗೆ ಸಂಬಂಧಿಸಿದಂತೆ ಶಾಸಕರಲ್ಲಿ ಮಾತುಕತೆ ನಡೆಸಲಾಗುವುದು. ಉಪ್ಪಿನಂಗಡಿಯಲ್ಲಿ ಯುಜಿಡಿಗೆ ಸಂಬಂಧಿಸಿ ಪ್ರಯತ್ನ ನಡೆಸಲಾಗುವುದು ಎಂದು ಕೃಷ್ಣಮೂರ್ತಿ ಅವರು ಸಭೆಯಲ್ಲಿ ತಿಳಿಸಿದರು.

ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.