ರಾಸಾಯನಿಕ ಮುಕ್ತ ಮಾವು ಬೆಳೆಗೆ ಮಾರುಕಟ್ಟೆ ಕಲ್ಪಿಸಿ

| Published : Oct 31 2023, 01:15 AM IST

ಸಾರಾಂಶ

ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ಬೆಳೆಗಳಿಗೆ ಹಾಗೂ ಬೆಳೆಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿನ ಪ್ರಸಿದ್ಧ ಕೇಸರ್ ಮಾವಿನಂತೆ ರಾಸಾಯನಿಕ ಮುಕ್ತ ಮಾವನ್ನು ಪ್ರಾಯೋಗಿಕವಾಗಿ ಬೆಳೆದು ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಿ

ಕೊಪ್ಪಳ: ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ಬೆಳೆಗಳಿಗೆ ಹಾಗೂ ಬೆಳೆಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿನ ಪ್ರಸಿದ್ಧ ಕೇಸರ್ ಮಾವಿನಂತೆ ರಾಸಾಯನಿಕ ಮುಕ್ತ ಮಾವನ್ನು ಪ್ರಾಯೋಗಿಕವಾಗಿ ಬೆಳೆದು ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ ಕೆ.ಪಿ. ಮೋಹನರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯುವುದು ತೋಟಗಾರಿಕೆ ಬೆಳೆಗಳ ಉತ್ಪನ್ನದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ. ಇದರೊಂದಿಗೆ ಪ್ರಸ್ತುತ ಅತಿಹೆಚ್ಚು ಬೇಡಿಕೆ ಇರುವ ರಾಸಾಯನಿಕ ಮುಕ್ತ ಮಾವು ಬೆಳೆಯಲು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಿ. ಮಾವಿನ ಸಸಿ ನೆಡುವುದರಿಂದ ಹಣ್ಣು ಮಾಗಿಸುವವರೆಗೂ ಸಂಪೂರ್ಣವಾಗಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ, ಆರ್ಗ್ಯಾನಿಕ್ ರೀತಿಯಲ್ಲಿ ಮಾವು ಬೆಳೆಯಬೇಕು. ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ಬೆಳೆಗಳಿಗೆ, ಬೆಳೆಗಳ ಉತ್ಪನ್ನಗಳಿಗೆ ಬಹಳ ಬೇಡಿಕೆ ಇದ್ದು, ಜಿಲ್ಲೆಯಲ್ಲಿ ನಿರ್ದಿಷ್ಟ ಪ್ರದೇಶವನ್ನು ಗುರುತಿಸಿ ಪ್ರಾಯೋಗಿಕವಾಗಿ ಪ್ರಯತ್ನಿಸೋಣ ಎಂದರು.

ಪ್ರಸ್ತುತ ಜಿಲ್ಲೆಯದೇ ಬ್ರಾಂಡ್ ಆದ ಕೇಸರ್ ಮಾವಿನ ರೀತಿಯಲ್ಲೇ ರಾಸಾಯನಿಕ ಮುಕ್ತ ಮಾವು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಿ, ಉತ್ತಮ ಮಾರುಕಟ್ಟೆ ಕಲ್ಪಿಸಲು ಕ್ರಮ ವಹಿಸಿ ಎಂದು ತೋಟಗಾರಿಕೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ತೋಟಗಾರಿಕೆ, ಕೃಷಿ, ರೇಷ್ಮೆ, ಮೀನುಗಾರಿಕೆ, ಪಶುವೈದ್ಯಕೀಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ, ಸಹಕಾರ ಇಲಾಖೆಗಳ ಮುಖ್ಯಸ್ಥರು ಸೇರಿ ಜಿಲ್ಲಾ ಮಟ್ಟದಲ್ಲಿ ಉಪಸಮಿತಿ ರಚಿಸಿಕೊಳ್ಳಿ. ಇದರಿಂದ ರೈತರಿಗೆ ಸಂಬಂಧಿಸಿದ ಯಾವುದೇ ಯೋಜನೆ, ಕಾರ್ಯಕ್ರಮ ಅನುಷ್ಠಾನಕ್ಕೆ ಅನುಕೂಲವಾಗುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಇಲಾಖೆಗಳು ಒಂದಕ್ಕೊಂದು ಪೂರಕವಾಗಿದ್ದು, ಬೆಳೆ ಹಾನಿ, ರೈತರಿಗೆ ವಿಮೆ ಯೋಜನೆ ಒದಗಿಸುವಂತ ಬಹುತೇಕ ವಿಷಯಗಳಲ್ಲಿ ಕಾರ್ಯಶೈಲಿ ಬೇರೆ ಬೇರೆ ಇದ್ದರೂ ಉದ್ದೇಶ ರೈತರಿಗೆ ಯೋಜನೆಯ ಲಾಭ ಒದಗಿಸುವುದಾಗಿರುತ್ತದೆ. ಆದ್ದರಿಂದ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದರು.

ಜಿಲ್ಲಾ ಆಯುಷ್ ಇಲಾಖೆಯಿಂದ ಕೊಪ್ಪಳ, ಯಲಬುರ್ಗಾ, ಗಂಗಾವತಿ, ಗಿಣಿಗೇರಾಗಳಲ್ಲಿ ಪಂಚಕರ್ಮ ಸೇವೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಬಿಸಿಲು ಹೆಚ್ಚಿರುವ ಕಾರಣ ಆಯುರ್ ಬಾತ್ ಅನ್ನು ಅಳವಡಿಸಿಕೊಳ್ಳಿ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಅದರಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಲೇರಿಯ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಆಯುಷ್, ಕಿಮ್ಸ್ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳ ಉಪಸಮಿತಿಯನ್ನು ರಚಿಸಿಕೊಂಡು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿ. ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಗತ್ಯ ತಜ್ಞ ವೈದ್ಯರನ್ನು ನಿಯೋಜಿಸಿ. 108 ಆ್ಯಂಬುಲೆನ್ಸ್ ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತ್ತವಾಗುವಂತೆ ಕ್ರಮ ವಹಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ ಇದ್ದರು.