ಸಾರಾಂಶ
ಮುಂಡರಗಿ: ಡೆಂಘೀ, ಚಿಕೂನ್‌ಗುನ್ಯಾ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಸಜ್ಜನರ ಹೇಳಿದರು.
ಇಲ್ಲಿಯ ಪುರಸಭೆ ಸಭಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿಗಳು, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ನಡೆದ ಪುರಸಭೆ ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಡೆಂಘೀ ಈಡಿಸ್ ಇಜಿಪ್ಟ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ಸ್ವಚ್ಛವಾದ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು, ತನ್ನ ವಂಶಾಭಿವೃದ್ದಿಯನ್ನು ಮಾಡುತ್ತವೆ. ವಿಪರೀತ ಜ್ವರ, ಮೈ-ಕೈ ನೋವು, ತಲೆ ನೋವು ಹಾಗೂ ಕಣ್ಣುಗಳು ಕೆಂಪಾಗುವಿಕೆಯೂ ರೋಗದ ಲಕ್ಷಣಗಳಾಗಿವೆ. ಅದಕ್ಕಾಗಿ ಈ ರೋಗವು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲಿ ಶೇಖರಿಸುವ ನೀರಿನ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ನೀರನ್ನು ಶೇಖರಿಸಿ ಮೇಲೆ ಮುಚ್ಚಬೇಕು. ಮನೆಯ ಸುತ್ತ-ಮುತ್ತಲಿನ ಪರಿಸರವನ್ನು ಸ್ಚಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆ ಬತ್ತಿ, ಬೇವಿನ ಸೊಪ್ಪಿನ ಹೊಗೆ, ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಮಾತನಾಡಿ, ಡೆಂಘೀ ಜ್ವರದಲ್ಲಿ 3 ವಿಧಗಳು ಇವೆ. ಡೆಂಘೀ ಜ್ವರ, ಡೆಂಘೀ ರಕ್ತ ಸ್ರಾವ ಹಾಗೂ ಡೆಂಘೀ ಶಾಕ ಸಿಡ್ರೋಮ್ ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ ರೋಗದ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ಪುರಸಭೆಯ ಪೌರ ಕಾರ್ಮಿಕರು ತಮ್ಮ ದೈನಂದಿನ ಕಾರ್ಯಗಳಲ್ಲಿ ಟೈರ್, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯನ್ನು ಸರಿಯಾದ ವಿಧಾನದಲ್ಲಿ ಮಾಡಬೇಕು ಹಾಗೂ ಎಲ್ಲ ವಾರ್ಡ್‌ಗಳಲ್ಲಿ ಮಳೆಯ ನೀರು ನಿಲ್ಲದ ಹಾಗೇ ಸರಾಗವಾಗಿ ಹರಿಯುವಂತೆ ಮಾಡುವುದು, ಚರಂಡಿ ಸ್ವಚ್ಛಗೊಳಿಸುವುದು, ಬಕೆಟ್, ಡಬ್ಬಿ, ಕೊಡ ಮುಂತಾದ ಘನತ್ಯಾಜ್ಯ ವಸ್ತುಗಳನ್ನು ಗುಜರಿ ಅಂಗಡಿ ಮಾಲೀಕರಿಗೆ ಸೂಕ್ತ ಸ್ಥಳಗಳಲ್ಲಿ ಸ್ಥಳಾಂತರಿಸಲು ಸೂಚಿಸಬೇಕು ಎಂದರು.ಈ ವೇಳೆ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ರಫೀಕ್ ಮುಲ್ಲಾನವರ, ನಾಗೇಶ ಹುಬ್ಬಳ್ಳಿ ಸೇರಿದಂತೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಇದ್ದರು. ಕಾಳಪ್ಪ ಬಡಿಗೇರ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಮ್ಯಾಗೇರಿ ವಂದಿಸಿದರು.