ರೈತರು ಬೆಳೆಗಳನ್ನು ಇನ್ಸುರೆನ್ಸ್ ವ್ಯಾಪ್ತಿಗೆ ಒಳಪಡಿಸಲಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

| Published : May 16 2025, 01:52 AM IST

ರೈತರು ಬೆಳೆಗಳನ್ನು ಇನ್ಸುರೆನ್ಸ್ ವ್ಯಾಪ್ತಿಗೆ ಒಳಪಡಿಸಲಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬೆಳೆವಿಮೆ ಕಂತು ಪಾವತಿ ಮಾಡಲು ಹಿಂದೇಟು ಹಾಕದೇ ಕಡ್ಡಾಯವಾಗಿ ತಮ್ಮ ಬೆಳೆಗಳನ್ನು ಇನ್ಸೂರೆನ್ಸ್ ವ್ಯಾಪ್ತಿಗೆ ಒಳಪಡಿಸಿಕೊಳ್ಳಬೇಕು.

ಶಿರಸಿ: ರೈತರು ಬೆಳೆವಿಮೆ ಕಂತು ಪಾವತಿ ಮಾಡಲು ಹಿಂದೇಟು ಹಾಕದೇ ಕಡ್ಡಾಯವಾಗಿ ತಮ್ಮ ಬೆಳೆಗಳನ್ನು ಇನ್ಸೂರೆನ್ಸ್ ವ್ಯಾಪ್ತಿಗೆ ಒಳಪಡಿಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಹವಾಮಾನ ಆಧರಿತ ಬೆಳೆ ವಿಮೆ ಮಂಜೂರಿ ಮಾಡಿಸುವಲ್ಲಿ ವಿಶೇಷ ಪಾತ್ರ ವಹಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಮಾರಾಟ ಸಹಕಾರ ಸಂಘಗಳು, ಸಮಸ್ತ ರೈತರ ಪರವಾಗಿ ನಗರದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ೨೦೧೬ರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಿತು. ನಂತರ ಎಲ್ಲ ವರ್ಷ ರೈತರಿಗೆ ಪರಿಹಾರ ದೊರಕಿತ್ತು. ಈ ವರ್ಷ ತಾಂತ್ರಿಕ ಸಮಸ್ಯೆಯಿಂದ ನವೆಂಬರ್‌ನಲ್ಲಿ ದೊರೆಯಬೇಕಾಗಿದ್ದ ಪರಿಹಾರ ಮೇ ತಿಂಗಳಿನಲ್ಲಿ ಸುಮಾರು ೩೫ ಸಾವಿರ ರೈತರಿಗೆ ₹೮೨.೭೧ ಕೋಟಿ ಬೆಳೆ ವಿಮೆ ಹಣ ಜಮೆಯಾಗಿದೆ. ಜಿಲ್ಲೆಯ ೧೧ ತಾಲೂಕಿನ ಅಡಿಕೆ, ಮಾವು, ಶುಂಠಿ, ಕಾಳುಮೆಣಸಿನ ಬೆಳೆಗಳಿಗೆ ವಿಮೆ ಪರಿಹಾರದ ಹಣ ಬಂದಿದೆ. ಮಳೆಯನ್ನಾಧರಿಸಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗುತ್ತದೆ. ಆಗಸ್ಟ್‌ ೧ರಿಂದ ಜುಲೈ ೩೧ರವರೆಗೆ ವಿಮಾ ವರ್ಷವಿರುವುದರಿಂದ ಈ ಅವಧಿಯಲ್ಲಿ ಮಳೆ ಮಾಪನ ದುರಸ್ತಿಯಲ್ಲಿರುವುದು ಅತ್ಯವಶ್ಯ. ನಮ್ಮ ಜಿಲ್ಲೆಗೆ ಫಸಲ್ ವಿಮಾ ಯೋಜನೆಯಲ್ಲಿ ₹೪೪.೩೪ ಕೋಟಿ ಬಂದಿದೆ. ಕೇಂದ್ರ ಸರ್ಕಾರ ಯೋಜನೆ ನಮ್ಮ ಜಿಲ್ಲೆಯ ರೈತರಿಗೆ ಬಹಳ ಅನುಕೂಲವಾಗಿದೆ. ನವೆಂಬರ್ ನಲ್ಲಿ ಜಮಾ ಆಗಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದ್ದು, ನಂತರ ಸಹಕಾರಿ ಸಂಘಗಳು ಹೋರಾಟದ ರೂಪುರೇಷೆ ಸಿದ್ಧತೆ ನಡೆಸಿತು. ನಂತರ ಈ ವಿಷಯ ಗಂಭೀರತೆ ಪಡೆದುಕೊಂಡಿತು. ಶಿವಮೊಗ್ಗದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ ಸಿಂಗ್ ಚೌಹ್ಹಾಣ್ ಆಗಮಿಸಿದ್ದ ವೇಳೆ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಎದುರಾಗಿದ್ದ ಸಮಸ್ಯೆಯ ವಸ್ತುಸ್ಥಿತಿ ಮನವರಿಕೆ ಮಾಡಿದ ತಕ್ಷಣ ಸಚಿವರು ದೆಹಲಿಯಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆದೇಶ ನೀಡಿದ್ದರು. ೩ ಆದೇಶ ಮಾಡಿದ ಬಳಿಕ ವಿಮಾ ಕಂಪೆನಿಯು ರೈತರಿಗೆ ಸಲ್ಲಬೇಕಾಗಿದ್ದ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದರು.

ರಾಜ್ಯ ಸರ್ಕಾರವು ಪಂಚಾಯತ ವ್ಯಾಪ್ತಿಯ ಮಳೆ ಯಂತ್ರವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಇನ್ಸೂರೆನ್ಸ್ ಕಂಪೆನಿಗಳು ತಾಂತ್ರಿಕ ಕಾರಣವನ್ನು ಹೇಳುತ್ತಾರೆ. ಮಳೆ ಯಂತ್ರವು ದಾಖಲೆ ನೀಡದಿದ್ದರೆ ತೊಂದರೆಯಾಗುತ್ತದೆ. ಇದರಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಂಕೆ-ಸಂಖ್ಯೆಗಳನ್ನು ನೀಡುವಾಗ ಎಚ್ಚರಿಕೆ ವಹಿಸುವುದು ಅತ್ಯವಶ್ಯ. ಮಳೆಯ ಲೆಕ್ಕಾಚಾರ ಪಾರದರ್ಶಕವಾಗಿ ರೈತರಿಗೆ, ಸಂಘ-ಸಂಸ್ಥೆಗಳಿಗೆ ತಲುಪುವಂತಾಗಬೇಕು. ಕದ್ದುಮುಚ್ಚಿ ಇಡುವ ಸಂದರ್ಭ ಬರಬಾರದು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ತಾಂತ್ರಿಕ ಸಮಸ್ಯೆಯಾಗಿದೆ ಎಂದಾದರೆ ಅದನ್ನು ಕೇಂದ್ರ ಸರ್ಕಾರಕ್ಕೆ ಸಂಸದರು ಮನವರಿಕೆ ಮಾಡಿಕೊಡುತ್ತೇವೆ ಎಂದರು.

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ, ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್.ಭಟ್ಟ ತೋಟಿಕೊಪ್ಪ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಇದ್ದರು.

ರೈತರ ಪರವಾಗಿ ಈಶ್ವರ ನಾಯ್ಕ ಮಾತನಾಡಿದರು. ನಿರ್ದೇಶಕ ನರಸಿಂಹ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಭಾರ್ಗವ ಹೆಗಡೆ ಶಿಗೇಹಳ್ಳಿ ನಿರೂಪಿಸಿದರು.