ಸಾರಾಂಶ
ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ 28ನೇ ವಾರ್ಷಿಕೋತ್ಸವ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾವಂತರಿಗೆ ಬಹುಮಾನ ವಿತರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಪ್ರತಿಭೆ ಹೊಂದಿದ್ದು, ತಮ್ಮ ಪ್ರತಿಭೆ ಮೂಲಕ ಜೀವನದಲ್ಲಿ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಜೀವನವನ್ನು ತಂದೆ ತಾಯಿಗೆ ಹೆಮ್ಮೆಯಾಗುವಂತೆ ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಕೊಡವ ಸಮಾಜ ಎಜುಕೇಷನಲ್ ಕೌನ್ಸಿಲ್ ಆಶ್ರಯದಲ್ಲಿ ನಡೆಯುತ್ತಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ 28ನೇ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಪಠ್ಯಕ್ರಮದ ಕಲಿಕೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣ ಮಾಡಲು ವಾರ್ಷಿಕೋತ್ಸವ ವೇದಿಕೆಯಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ವಿದ್ಯಾರ್ಥಿಯಾಗಿ ರೂಪಿಸಿ ಸಮಾಜದಲ್ಲಿ ಗೌರವಯುತ ಪ್ರಜೆಯಾಗಿ ರೂಪಿಸುವಲ್ಲಿ ಬೋಧಕರ ಮಹತ್ತರ ಪಾತ್ರವಿದೆ. ಹಾಗೆಯೇ ಪೋಷಕರು ಸಹ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಬಗ್ಗೆ ಶಾಲೆಗೆ ಆಗಾಗ ಭೇಟಿ ನೀಡಿ ಸಮಾಲೋಚನೆ ನಡೆಸುವುದು ಸಹ ಮುಖ್ಯ ಎಂದರು.ಮತ್ತೋರ್ವ ಮುಖ್ಯ ಅತಿಥಿ ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಮಾಳೇಟಿರ ಕಾವೇರಪ್ಪ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರಲು ತ್ಯಾಗ ಮಾಡುತ್ತಾರೆ. ಹಾಗೆಯೇ ಬೋಧಕರು ಶಿಲ್ಪಿಗಳಂತೆ ಮಕ್ಕಳಿಗೆ ಬುದ್ಧಿ ಹೇಳಿ ಕಲಿಸುತ್ತಾರೆ. ಶಿಕ್ಷಣದ ಸಮಯದಲ್ಲಿ ಹೆಚ್ಚಿನ ಪರಿಶ್ರಮದಿಂದ ಕಲಿತಾಗ ಮಾತ್ರ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಾಯವಾಗಲಿದೆ. ಪೋಷಕರೇ ಮಕ್ಕಳಿಗೆ ಮೊದಲ ಸ್ನೇಹಿತರು ಮತ್ತು ಗುರುಗಳು. ಯಾವುದೇ ಕಷ್ಟ ಬಂದಾಗ ದೃತಿಗೆಡದೆ ಶಿಕ್ಷಣದ ಸಮಯದಲ್ಲಿ ಪರಿಶ್ರಮವಹಿಸಿ ಕಲಿಯಬೇಕು. ಇದಾದಾಗ ಮಾತ್ರ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಲು ಸಾಧ್ಯವಿದೆ. ನಿಮ್ಮ ಜೀವನವನ್ನು ರೂಪಿಸುವ ಜವಾಬ್ದಾರಿ ನಿಮ್ಮ ಕೈಯಲ್ಲಿಯೇ ಇದೆ ಎಂದು ಹೇಳಿದರು.ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಪ್ರತಿಭೆಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವುದು ಪೋಷಕರು ಹಾಗೂ ಬೋಧಕರ ಕರ್ತವ್ಯ. ಆಡಳಿತ ಮಂಡಳಿ ಶಾಲೆಗೆ ಬೇಕಾದ ಸೌಲಭ್ಯವನ್ನು ಒದಗಿಸುವುದು ಕರ್ತವ್ಯ. ವಿದ್ಯಾರ್ಥಿಗಳು ಸಾಧನೆ ಮಾಡಲು ಏಕಾಗ್ರತೆಯಿಂದ ಪಠ್ಯಕ್ರಮ ಕಲಿಯುವುದು ಮುಖ್ಯವಾಗಿದೆ. ಶಿಸ್ತು, ನೈತಿಕ ಮೌಲ್ಯದೊಂದಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ನೆರವಿನಿಂದ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ನಡೆಸಿಕೊಂಡು ಬರಲಾಗುತ್ತಿದೆ. ದಾನಿಗಳು ಯಾವುದೇ ಫಲ, ಅಪೇಕ್ಷೆ ಇಲ್ಲದೆ ನೀಡಿದ ಸಹಕಾರದಿಂದ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತಿದೆ. ನಮ್ಮ ಶಾಲೆಯಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಆಧುನಿಕವಾದ ಸ್ಮಾರ್ಟ್ ಕ್ಲಾಸ್‌ಗಳು, ಡಿಜಿಟಲ್ ಆಡಿಯೋ, ವಿಷನ್ ತರಗತಿಗಳು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ ಎಂದರು.ಈ ಸಂದರ್ಭ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕ ನೀಡಿ ಪ್ರೋತ್ಸಾಹಿಸಲಾಯಿತು.ಮುಖ್ಯಶಿಕ್ಷಕಿ ಮಲಚೀರ ತನುಜಾ ಅವರು ವಾರ್ಷಿಕ ವರದಿ ಮಂಡಿಸಿದರು. ಶಾಲಾ ಆಡಳಿತ ಮಂಡಳಿ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯಪ್ಪ, ಐನಂಡ ಸುಬ್ರಮಣಿ ಮಂದಣ್ಣ, ಕೋಟೆರ ಕಿಶನ್ ಉತ್ತಪ್ಪ, ಕೊಣಿಯಂಡ ಸಂಜು ಸೋಮಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಚೀರಂಡ ದೇಚಮ್ಮ, ಮಲಚೀರ ಲೋಕೇಶ್ ಹಾಜರಿದ್ದರು.ಅಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಯಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಮೂಕಳಮಾಡ ಅರಸು ನಂಜಪ್ಪ ವಂದಿಸಿದರು.