ಕನ್ನಡಪ್ರಭ ವಾರ್ತೆ ರಾಮನಗರ

ಎಚ್.ಐ.ವಿ ಸೋಂಕಿನ ಕುರಿತು ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.

ನಗರದ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಏಡ್ಸ್ ಸುರಕ್ಷಾ ಅಭಿಯಾನದ (ಎಂಎಎಸ್) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಏಡ್ಸ್ ಸುರಕ್ಷಣಾ ಅಭಿಯಾನದಡಿ ಆಗಸ್ಟ್ 12ರ ಅಂತಾರಾಷ್ಟ್ರೀಯ ಯುವ ದಿನದಂದು ರಾಜ್ಯಾದ್ಯಂತ ತೀವ್ರಗೊಳಿಸಿದ ಐಇಸಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಇದರ ಅಂಗವಾಗಿ ಜಿಲ್ಲೆಯ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮ ಮಟ್ಟದಲ್ಲಿ ಹಾಗೂ ಗ್ರಾಮ ಸಭೆಗಳಲ್ಲಿ 135ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಎಚ್.ಐ.ವಿ ಅಪಾಯವಿರುವ ಪ್ರದೇಶಗಳಲ್ಲಿ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ಏರ್ಪಡಿಸಬೇಕು. ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಮ್ಯಾರಥಾನ್ , ಬೈಕ್ ರ‍್ಯಾಲಿ, ರಕ್ತದಾನ ಶಿಬಿರಗಳ ಆಯೋಜನೆ, ಸಮಗ್ರ ಆರೋಗ್ಯ ಶಿಬಿರ ಆಯೋಜನೆ ಸೇರಿದಂತೆ ಇನ್ನಿತರೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದರು.


ಜಿಲ್ಲೆಯಲ್ಲಿ 3,211 ಎಚ್‌ಐವಿ ಸೋಂಕಿತರನ್ನು ಗುರುತಿಸಲಾಗಿದ್ದು, ಇದರಲ್ಲಿ 1,058 ಮಂದಿ ಮರಣ ಹೊಂದಿದ್ದಾರೆ. ಇದುವರೆಗೂ ಜಿಲ್ಲೆಯ ಎಆರ್‌ಟಿ ಕೇಂದ್ರಗಳಲ್ಲಿ ಇತರೆ ಜಿಲ್ಲೆಯವರು ಸೇರಿದಂತೆ ಒಟ್ಟು 4,271 ಜನರು ಚಿಕಿತ್ಸೆಗೆ ನೋಂದಾಯಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್.ಐ.ವಿ. ಸೋಂಕು ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಬಹುದು ಎಂದು ಹೇಳಿದರು.

ಸೋಂಕಿತರಿಗೆ ಕಳಂಕ ರಹಿತ ಜೀವನ ನಡೆಸಲು ಅನುವು ಮಾಡಿಕೊಡಬೇಕು. ಆಪ್ತ ಸಮಾಲೋಚನೆ ನಡೆಸಿ, ಗೌಪ್ಯತೆ ಕಾಪಾಡುತ್ತಾ, ಸೇವೆಗಳನ್ನು ಒದಗಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.

ಧನ್ಯಶ್ರೀ, ಚೇತನಾ, ಮೈತ್ರಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳು ಸೇರಿದಂತೆ ಎಚ್.ಐ.ವಿ ಸೋಂಕಿತರು ಏಡ್ಸ್ ಬಾಧಿತರಿಗೆ ವಿವಿಧ ಇಲಾಖೆಗಳಿಂದ ನೀಡಲಾಗುವ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಎಚ್.ಐ.ವಿ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯ ವೈದ್ಯರು ನಿಯಮಿತವಾಗಿ ಕಾಲೇಜು, ಹಾಸ್ಟೆಲ್, ಕೈಗಾರಿಕಾ ಪ್ರದೇಶಗಳು ಸೇರಿದಂತೆ ಇತರೆಡೆಗೆ ಭೇಟಿ ನೀಡಿ, ಆರೋಗ್ಯ ಶಿಬಿರ ಹಾಗೂ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಎಚ್.ಐ.ವಿ ಸೋಂಕಿತ ಸಂಪರ್ಕಿತರ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸಬೇಕು ಎಂದು ಚಂದ್ರಯ್ಯ ಹೇಳಿದರು.

ಸಭೆಯಲ್ಲಿ ಡಾ. ಕುಮಾರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಆರೋಗ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.