ಇಂಡಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ

| Published : Sep 21 2025, 02:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ರಾಜ್ಯ ಸರ್ಕಾರ ಇಂಡಿ ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಿ ಆದೇಶ ಮಾಡಿದೆ. ಪರಿಣಾಮ ಇಂಡಿ ನಗರ ಇನ್ನು ಅಭಿವೃದ್ಧಿಯ ನಾಗಾಲೋಟ ಶುರುವಾಗುವ ನಿರೀಕ್ಷೆ ಇದೆ. ಈ ಮೊದಲು ಪುರಸಭೆ ಹಾಗೂ ಯೋಜನಾ ಪ್ರಾಧಿಕಾರ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇದೀಗ ಸರ್ಕಾರ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಿರುವುದರಿಂದ ಇಂಡಿ ಯೋಜನಾ ಪ್ರಾಧಿಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ರಾಜ್ಯ ಸರ್ಕಾರ ಇಂಡಿ ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಿ ಆದೇಶ ಮಾಡಿದೆ. ಪರಿಣಾಮ ಇಂಡಿ ನಗರ ಇನ್ನು ಅಭಿವೃದ್ಧಿಯ ನಾಗಾಲೋಟ ಶುರುವಾಗುವ ನಿರೀಕ್ಷೆ ಇದೆ. ಈ ಮೊದಲು ಪುರಸಭೆ ಹಾಗೂ ಯೋಜನಾ ಪ್ರಾಧಿಕಾರ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇದೀಗ ಸರ್ಕಾರ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಮಾಡಿರುವುದರಿಂದ ಇಂಡಿ ಯೋಜನಾ ಪ್ರಾಧಿಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.

ಇಂಡಿಗೆ ಒಂದೊಂದರಂತೆ ಸರ್ಕಾರ ಕೊಡುಗೆಗಳನ್ನು ನೀಡುತ್ತಿದ್ದು, ಇಂಡಿ ಅಭಿವೃದ್ಧಿಗೆ ಸಾಕ್ಷಿಯಾಗಲಿವೆ. ಶಾಸಕ ಯಶವಂತರಾಯಗೌಡ ಪಾಟೀಲರು ಇಂಡಿಯನ್ನು ಸರ್ವ ವಿಧದಲ್ಲಿ ಅಭಿವೃದ್ಧಿ ಪಡಿಸಲು ನಾನಾ ಯೋಜನೆಗಳು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಕೇವಲ 6 ತಿಂಗಳಲ್ಲಿಯೇ ಇಂಡಿಗೆ ನಗರಸಭೆ, ಜಿಟಿಟಿಸಿ ಕಾಲೇಜು ಮಂಜೂರು, ಸಧ್ಯ ಇಂಡಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ಮಂಜೂರು ಆಗಿದೆ. ಹೀಗಾಗಿ ಶಾಸಕ ಯಶವಂತರಾಯಗೌಡ ಪಾಟೀಲರ ಅಭಿವೃದ್ಧಿಪರ ಚಿಂತನೆಯ ಯಶಸ್ಸಿನತ್ತ ಸಾಗುತ್ತಿದೆ. ಇಂಡಿಗೆ ಯೋಜನಾ ಪ್ರಾಧಿಕಾರ ಮಂಜೂರು ಆಗಿರುವುದರಿಂದ, ವಿಜಯಪುರಕ್ಕೆ ಅಲೆದಾಡುವುದು ತಪ್ಪಿದಂತಾಗಿದೆ. ಈ ಮೊದಲು ಕಟ್ಟಡ ಪರವಾನಗಿ, ವಿನ್ಯಾಸ ಅನುಮೋದನೆಗೆ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿ, ಪ್ರಸ್ತಾವನೆ ತಯಾರಿಸಿ, ವಿಜಯಪುರದ ಟೌನ್‌ ಪ್ಲ್ಯಾನ್‌ ಕಚೇರಿಗೆ ಸಲ್ಲಿಸಬೇಕಾಗುತ್ತಿತ್ತು. ಆದರೆ ಸಧ್ಯ ಹಾಗಲ್ಲ, ಕಟ್ಟಡ ಪರವಾನಗಿ, ವಿನ್ಯಾಸ ಅನುಮೋದನೆ ಇಂಡಿಯ ಯೋಜನಾ ಪ್ರಾಧಿಕಾರದಲ್ಲಿಯೇ ದೊರೆಯಲಿದೆ. ಒಂದು ನಿವೇಶನದಲ್ಲಿ ಭಾಗ ಮಾಡುವುದು, ಭಾಗವಾಗಿರುವ ನಿವೇಶನ ಒಂದುಗೂಡಿಸುವುದು, ಎನ್‌ಎ(ಬಿನ್‌ಶೆತ್ಕಿ) ಅಭಿಪ್ರಾಯವೂ ಇಲ್ಲಿಯೇ ದೊರೆಯಲಿದೆ. ಇದರಿಂದ ಸಾರ್ವಜನಿಕರು ವಿಜಯಪುರದ ಕಚೇರಿಗೆ ಅಲೆದಾಡುವುದು ತಪ್ಪಿದಂತಾಗಿದೆ.

ಈ ಯೋಜನಾ ಪ್ರಾಧಿಕಾರಕ್ಕೆ ಒರ್ವ ಅಧ್ಯಕ್ಷ, ಸಹಾಯಕ ನಿರ್ದೇಶಕರು (ಸದಸ್ಯ ಕಾರ್ಯದರ್ಶಿ), ಪುರಸಭೆಯ ಒರ್ವ ಸದಸ್ಯ ನೇಮಕ, ಪುರಸಭೆ ಮುಖ್ಯಾಧಿಕಾರಿ ಸದಸ್ಯ ಕಾರ್ಯದರ್ಶಿ, ಇಬ್ಬರು ಸರ್ಕಾರದಿಂದ ನಾಮ ನಿರ್ದೇಶನಗೊಂಡ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಾಗುತ್ತದೆ.

ಈ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ರಚನೆ, ಮಾಸ್ಟರ್‌ ಪ್ಲ್ಯಾನ್‌ ಇಂಪ್ಲಿಮೆಂಟ್‌, ರಿಂಗ್‌ ರಸ್ತೆ ಅಭಿವೃದ್ದಿ, ನಾಗರಿಕ ಸೌಲಭ್ಯ ಒದಗಿಸುವ ಕಾರ್ಯ ಪ್ರಾಧಿಕಾರದಿಂದ ನಡೆಯಲಿದೆ. ಇಂಡಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಇಂಡಿ, ಚಿಕ್ಕಬೇವನೂರ, ಮಾವಿನಹಳ್ಳಿ, ಇಂಗಳಗಿ, ರೂಗಿ ಕಂದಾಯ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ. ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಪ್ರಾಧಿಕಾರದ ಮುಖ್ಯಸ್ಥರಾಗಿದ್ದು, ಅವರನ್ನು ಸರ್ಕಾರ ನೇಮಕ ಮಾಡಲಿದೆ. ಸದಸ್ಯ ಕಾರ್ಯದರ್ಶಿ ಕಚೇರಿಯ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು, ಕಚೇರಿಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ.

ಮಹಾಯೋಜನೆ ತಯಾರಿಕೆ: ಯೋಜನಾ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುವ ಪಟ್ಟಣ ಮತ್ತು ಅಭಿವೃದ್ಧಿ ಪಥದಲ್ಲಿರುವ ಗ್ರಾಮಗಳ ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ಮಹಾಯೋಜನೆ ಸಿದ್ದಪಡಿಸುವುದು ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಂತೆ ಈ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅಂಗೀಕಾರ ಪಡೆಯುವುದು. ಪಟ್ಟಣ ಮತ್ತು ಗ್ರಾಮ ವಿಸ್ತರಣಾ (ಬಡಾವಣೆ) ಯೋಜನೆ ಅಭಿವೃದ್ಧಿ ಸುಧಾರಣಾ ಯೋಜನೆಗಳು ಮತ್ತಿತರ ಪ್ರಗತಿ ಪೂರ್ವಕವಾದ ಯೋಜನೆಗಳನ್ನು ತಯಾರಿಸುವುದು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯಡಿಯಲ್ಲಿ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳಿಗೆ ತಾಂತ್ರಿಕವಾದ ನೆರವು ಮತ್ತು ಅನುಮೋದನೆಗಳನ್ನು ನೀಡುವುದು ಯೋಜನಾ ಪ್ರಾಧಿಕಾರದ ಕಾರ್ಯವಾಗಿದೆ.

ಕಚೇರಿಯ ಕಾರ್ಯನಿರ್ವಹಣೆ:

ಪ್ರಾಧಿಕಾರವು ಕೆಟಿಸಿಪಿ ಕಾಯ್ದೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಸದರಿ ಕಾಯ್ದೆಯಂತೆ ಯೋಜನಾ ಪ್ರದೇಶಗಳಲ್ಲಿ ಬರುವ ಜಾಗಗಳಿಗೆ ನಿಯಮಗಳ ಪ್ರಕಾರ ಭೂ ಪರಿವರ್ತನೆಗಾಗಿ ತಾಂತ್ರಿಕ ಅಭಿಪ್ರಾಯ ನೀಡುವುದು, ವಿನ್ಯಾಸ ಅನುಮೋದನೆ ಮತ್ತು ಕಟ್ಟಡವನ್ನು ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದಲ್ಲದೇ ಅನಧಿಕೃತ ಅಭಿವೃದ್ಧಿಗಳನ್ನು ಸಹ ನಿಯಂತ್ರಿಸಲು ಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೆ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಹಳ್ಳಿಗಳಿಗೆ ಅಭಿವೃದ್ಧಿ ನಕ್ಷೆ ತಯಾರಿಸುವ ಕೆಲಸ ಯೋಜನಾ ಪ್ರಾಧಿಕಾರದಿಂದ ನಡೆಯಲಿದೆ.

ಕೊಟ್‌ 1

ಯೋಜನಾ ಪ್ರಾಧಿಕಾರ ಮಂಜೂರು ಆಗಿರುವುದರಿಂದ ವಿಜಯಪುರಕ್ಕೆ ಹೋಗಿ ಕಟ್ಟಡ ಪರವಾನಗಿ ಹಾಗೂ ನಕ್ಷೆ ತಯಾರಿಸಿ ಅನುಮತಿ ಪಡೆಯುವುದು ಹಾಗೂ ಬಿನ್‌ ಶೆತ್ಕಿ ಜಮೀನು ಪರಿವರ್ತನೆ ಮಾಡಿಕೊಳ್ಳುವುದು ತಪ್ಪುತ್ತದೆ. ಇಂಡಿಯಲ್ಲಿಯೇ ಈ ಎಲ್ಲ ಸೌಲಭ್ಯಗಳು ದೊರೆಯುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಇಂಡಿ ಅಭಿವೃದ್ಧಿಗೆ ಏನೇನು ಬೇಕು ಎಲ್ಲವೂ ಒದಗಿಸಿಕೊಡುತ್ತಿದ್ದಾರೆ.

ಮುಸ್ತಾಕ ಇಂಡಿಕರ, ಪುರಸಭೆ ಸದಸ್ಯ

ಕೊಟ್‌ 2

ಇಂಡಿ ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಒದಗಿಸುತ್ತಿದ್ದಾರೆ. ಜಿಲ್ಲೆಗೆ ಬೇಕಾದ ಎಲ್ಲ ಅರ್ಹತೆಯ ಮಾನದಂಡಗಳನ್ನು ಹೊಂದುವ ಹಾಗೆ ಎಲ್ಲ ವಿಧದಲ್ಲಿಯೂ ಅಭಿವೃದ್ದಿ ಪಡಿಸುತ್ತಿದ್ದಾರೆ. ಇಂಡಿಗೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಆಗಿರುವುದರಿಂದ ಇಂಡಿ ಜನತೆಗೆ ವಿವಿಧ ದಾಖಲೆ ಪತ್ರಗಳನ್ನು ಪಡೆಯಲು ಅನುಕೂಲವಾಗಲಿದೆ.

ಸುಧೀರ ಕರಕಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ.