ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ ಯಶಸ್ವಿಗೊಳಿಸಿ: ಡಿಸಿ ಸಂಗಪ್ಪ

| Published : Sep 21 2025, 02:03 AM IST

ಸಾರಾಂಶ

ಜಿಲ್ಲೆಯಾದ್ಯಂತ ಸೆ.22 ರಿಂದ ಅ.7ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜರುಗಲಿದ್ದು, ಸಮೀಕ್ಷೆಗೆ ಆಗಮಿಸಿದ ಗಣತಿದಾರರಿಗೆ ಅಗತ್ಯ ದಾಖಲೆಗಳ ಜೊತೆಗೆ ಸೂಕ್ತ ಮಾಹಿತಿ ಒದಗಿಸಿ, ಸಹಕರಿಸುವ ಮೂಲಕ ಸಮೀಕ್ಷೆ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಾದ್ಯಂತ ಸೆ.22 ರಿಂದ ಅ.7ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜರುಗಲಿದ್ದು, ಸಮೀಕ್ಷೆಗೆ ಆಗಮಿಸಿದ ಗಣತಿದಾರರಿಗೆ ಅಗತ್ಯ ದಾಖಲೆಗಳ ಜೊತೆಗೆ ಸೂಕ್ತ ಮಾಹಿತಿ ಒದಗಿಸಿ, ಸಹಕರಿಸುವ ಮೂಲಕ ಸಮೀಕ್ಷೆ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಕರೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಸಮೀಕ್ಷೆ ಒಟ್ಟು 60 ಪ್ರಶ್ನೆಗಳನ್ನೊಳಗೊಂಡಿದ್ದು, ಗಣಿತಿದಾರರು ಮನೆ ಮನೆಗೆ ತೆರಳಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಈ ಸಮೀಕ್ಷೆ ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಸಂಖ್ಯೆಯ ಆಧಾರದಲ್ಲಿ ನಡೆಯಲಿದೆ. ಆದ್ದರಿಂದ ಸಾರ್ವಜನಿಕರು ನಿಖರವಾದ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಮೀಕ್ಷೆದಾರರಿಗೆ 2 ಹಂತದ ತರಬೇತಿ ನೀಡಲಾಗಿದೆ. ಸಮೀಕ್ಷೆ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಸುಮಾರು 4,75,236 ಮನೆಗಳನ್ನು ಗುರುತಿಸಿ ಯು.ಎಚ್.ಐ.ಡಿ ವಿವರಗಳೊಂದಿಗೆ ಜಿಯೋ ಟ್ಯಾಗ್ ಮಾಡುವ ಮೂಲಕ ಸ್ಟೀಕರ್‌ ಗಳನ್ನು ಅಂಟಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರು ಸಾರ್ವಜನಿಕರ ಜೊತೆಗೆ ವಿನಯದಿಂದ ವರ್ತಿಸಬೇಕು. ಚುರುಕಾಗಿ ಕಾರ್ಯನಿರ್ವಹಿಸಿ ಪ್ರತಿದಿನ ಕೈಗೊಂಡ ಸರ್ವೇ ಮಾಹಿತಿಯ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಸಮೀಕ್ಷೆ ಕಾರ್ಯಕ್ಕಾಗಿ ನೀಡಿದ ಐಡಿ ಕಾರ್ಡ್‌ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಆಯಾ ತಾಲೂಕಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳು ಸಮೀಕ್ಷೆಯ ಬಗ್ಗೆ ಪರಿಶೀಲಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಸಿ.ಮನ್ನಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿಏರ್ಶಕ ಕೆ.ಪ್ರಭಾಕರ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಾದ್ಯಂತ ಸಮೀಕ್ಷೆ ಕಾರ್ಯಕ್ಕಾಗಿ 4323 ಸಮೀಕ್ಷಾ ಬ್ಲಾಕ್‌ಗಳನ್ನು ಗುರುತಿಸಿ, ಪ್ರತಿ ಬ್ಲಾಕ್‌ಗೆ ಒಬ್ಬರಂತೆ ಸಮೀಕ್ಷಾದಾರರನ್ನು ನೇಮಿಸಲಾಗಿದೆ. ಸಮೀಕ್ಷಾ ಕಾರ್ಯ ಸಂಪೂರ್ಣವಾಗಿ ಮೊಬೈಲ್ ಸರ್ವ ಆ್ಯಪ್ ಮುಖಾಂತರ ನಡೆಯಲಿದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಗೊಂದಲವಿದ್ದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004ಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ. ಗಣತಿದಾರರಿಗೆ ಜಿಲ್ಲಾಡಳಿತದಿಂದ ಐಡಿ ಕಾರ್ಡ್‌ ನೀಡಲಾಗಿದೆ. ಸಮೀಕ್ಷೆ ಕೈಗೊಂಡ ಬಗ್ಗೆ ಪ್ರತಿದಿನ ವರದಿ ಪಡೆಯಲಾಗುತ್ತದೆ.

- ಸಂಗಪ್ಪ, ಜಿಲ್ಲಾಧಿಕಾರಿ