ಸಾರಾಂಶ
ಧಾರವಾಡ: ಜಾತಿ ಮತಗಳು ಅತ್ಯಂತ ಬಿಗಿಯಾಗಿರುವ ಸಮಾಜದಲ್ಲಿ ಸೃಜನಾತ್ಮಕ ಸೀಮೋಲ್ಲಂಘನೆಯು ಕಲೆಯ ದೊಡ್ಡ ಜವಾಬ್ದಾರಿಯಾಗಬೇಕು ಎಂದು ಚಿಂತಕ, ಸಾಹಿತಿ ರಹಮತ್ ತರೀಕೆರೆ ಹೇಳಿದರು.
ಇಲ್ಲಿಯ ಕರ್ನಾಟಕ ಕಾಲೇಜು ಆವರಣದ ಬಿಬಿಎ ಸಭಾಂಗದಲ್ಲಿ ನಿರ್ದಿಗಂತ ಉತ್ಸವದಲ್ಲಿ ತತ್ವಪದ-ಅಂತರಂಗ ಕುರಿತು ಮಾತನಾಡಿದರು.ನಿಜವಾಗಿಯೂ ಜಾತಿ ಮತ್ತು ವರ್ಣ ಮುರಿಯುತ್ತ ಬಂದಿರುವುದು ಯೋಗಿಗಳು ಹಾಗೂ ನಟರು ಎಂದೆನ್ನಿಸಿದೆ. ಕಲಾವಿದರ, ಅವಧೂತರ ಚರಿತ್ರೆ ಒಂದೆಯಾಗಿದ್ದು, ಅವರು ಸೀಮೋಲ್ಲಂಘನೆ ಮಾಡಿದವರು. ಸೃಜನಾತ್ಮಕ ಸೀಮೋಲ್ಲಂಘನೆ ಮಾಡದೇ ಯಾವ ದೊಡ್ಡ ಕಲೆ ಹುಟ್ಟೋದಿಲ್ಲ ಎಂದು ಹಲವು ಉದಾಹರಣೆ ಸಮೇತ ತಿಳಿಸಿದರು.
ಕಲಾವಿದರು ಎಂದೂ ಜಾತಿವಾದಿಗಳಾಗಬಾರದು, ಶಿಕ್ಷಕರು ಭ್ರಷ್ಟರಾಗಬಾರದು. ಭಾರತದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಬಿದ್ದಿರೋದು ಮಸೀದಿಗಳಲ್ಲ, ಬದಲಾಗಿ ಕಲಾ ಲೋಕಗಳ ಸಮಗ್ರತೆಗೆ ಮುಕ್ಕಾಗಿದೆ. ಇದೇ 25 ವರ್ಷಗಳ ಹಿಂದೆ ಮಸೀದಿ ಬೀಳಿಸಿದ್ದು ತಪ್ಪು ಎಂದು ಸಹಿ ಮಾಡಿದ ಕಲಾವಿದರು ಇಂದು ಬೇರೆ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈತ್ರಿಯನ್ನು ಮರಳಿ ಭಾರತಕ್ಕೆ ತರಲು ಕಲೆಯು ದೊಡ್ಡ ಜವಾಬ್ದಾರಿಯ ಕಾರ್ಯ ಮಾಡಬೇಕೆಂಬ ಸಲಹೆಯನ್ನು ತರೀಕರೆ ನೀಡಿದರು.ನಾನು ನನ್ನ ಜಾತಿಯಿಂದ ಬಂದ ಅನುಭವ ಬಿಟ್ಟು ಕೊಡಬೇಕಿಲ್ಲ. ಆದರೆ, ಅದನ್ನು ಶೋಧ ಮಾಡಿ ಕಲೆ ಮಾಡುವಾಗ ಬಿಟ್ಟು ಕೊಡುತ್ತೇನೆ. ಸಮಗ್ರ ಮಾನವನ ಬದುಕಿನ ಭಾಗವಾಗಿ ರೂಪಾಂತರ ಮಾಡುತ್ತೇವೆ. ಯಾವತ್ತೂ ನಾವು ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿಯೇ ಅನುಭವ ಪಡೆಯುತ್ತೇವೆ. ಆದರೆ, ಕಲೆಯಲ್ಲಿ ಆ ಅನುಭವ ಮರು ಹುಟ್ಟು ಪಡೆಯುತ್ತದೆ. ಆಗ ಯಾವುದೇ ಪಾತ್ರದಲ್ಲಿದ್ದರೂ ಎಲ್ಲರ ನೋವಿನ, ಸಂಭ್ರಮದ ಕಥನವಾಗಿ ಅನುಭವ ವಿಸ್ತರಣೆ ಪಡೆಯುತ್ತದೆ. ಇದು ಕಲೆಯಾಗಿ ಕಾಣುತ್ತದೆ ಎಂದರು.
ತತ್ವಪದಗಳ ಅಂತರಂಗಮುಂದುವರೆದು ಮಾತನಾಡಿದ ತರೀಕರೆ ಅವರು, ತತ್ವಪದಗಳ ಅಂತರಂಗವನ್ನು ಬಿಚ್ಚಿಟ್ಟರು. ತತ್ವಪದಕಾರರು ತತ್ವಪದಗಳಲ್ಲಿ ಕಂಡುಕೊಂಡ ನಾಲ್ಕು ಅನುಭವಗಳನ್ನು ಹೇಳಿದ್ದಾರೆ. ನಾದ (ಸಂಗೀತ), ಬೆಳಕು, ಬಣ್ಣ ಹಾಗೂ ಅಮೃತ ಪಾನದ ಅನುಭವಗಳು ಆಗಿದ್ದು, ಈ ಪೈಕಿ ಮೊದಲ ಮೂರು ಅನುಭವಗಳು ರಂಗಭೂಮಿಗೆ ಸಂಬಂಧಿಸಿವೆ ಎಂದಿದ್ದಾರೆ. ರಂಗಭೂಮಿಗೆ ಹಾಗೂ ತತ್ವಪದಕಾರರಿಗೆ ಆಂತರಿಕ ಸಂಬಂಧವಿದೆ ಎನ್ನುವ ತರೀಕರೆ, ನೈತಿಕ ಶುದ್ಧತೆ ಇರುವ ಸಾಧಕನನ್ನು ತಯಾರು ಮಾಡುವುದೇ ತತ್ವಪದಕಾರರು ಹಾಗೂ ಶರಣರು ಪ್ರಮುಖ ಕೆಲಸವಾಗಿತ್ತು. ಹೀಗಾಗಿ ಅವರ ಎಲ್ಲ ಬರವಣಿಗೆಯಲ್ಲಿ ಚಿತ್ತದ ಬಗ್ಗೆ ಚರ್ಚಿಸಿದ್ದಾರೆ. ಇಡೀ ತತ್ವಪದಗಳಲ್ಲಿ ಚಿತ್ತ ನಿಯಂತ್ರಿಸುವ ಹೆಚ್ಚು ಚರ್ಚೆಗಳಾಗಿವೆ. ಶಿಶುನಾಳರ ಸೋರುತಿಹುದು ಮನೆ ಮಾಳಿಗೆಯನ್ನು ಉದಾಹರಣೆ ಸಹ ಹೇಳಿದರು. ಇದಾದ ಬಳಿಕ ನಡೆದ ಸಂವಾದದಲ್ಲಿ ಪ್ರಶ್ನೆಗಳಿಗೆ ತರೀಕೆರೆ ಉತ್ತರ ನೀಡಿದರು. ಬೂಟಾಟಿಕೆ
ಲವ್ ಜಿಹಾದ ಎಂಬ ಕೆಟ್ಟ ಶಬ್ದವನ್ನು ನಮ್ಮಲ್ಲಿ ತಂದಿದ್ದಾರೆ. ನಿಜವಾಗಿಯೂ ರಂಗಭೂಮಿಯವರು ಧರ್ಮಾತೀತ, ಜಾತ್ಯತೀತ ಪ್ರೇಮಿಗಳು. ಭಾರತದಲ್ಲಿ ಸಣ್ಣ ಪುಟ್ಟ ಬೀದಿಯಲ್ಲಿ ಪ್ರೀತಿ ಮಾಡಿದರೆ ಹೊಡೆದಾಡುತ್ತೇವೆ. ಮುಂಬೈನ ಸಿನಿಮಾ ನಟರು ರಾಜಾರೋಷವಾಗಿ ಅಂತರ್ ಧರ್ಮೀಯ ಪ್ರೇಮ ಮಾಡುತ್ತಾರೆ. ಅವರೇ ನಾಯಕರಾಗಿದ್ದಾರೆ. ಇದು ಎಂತಹ ಬೂಟಾಟಿಕೆ ಎಂದು ತರೀಕೆರೆ ಪ್ರಶ್ನಿಸಿದರು.ಉತ್ಸವಕ್ಕೆ ಇಂದು ತೆರೆ
ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ಐದು ದಿನಗಳ ನಿರ್ದಿಗಂತ ಉತ್ಸವಕ್ಕೆ ಮಂಗಳವಾರ ತೆರೆ ಬೀಳಲಿದೆ. ಬೆಳಗಿನ ಗೋಷ್ಠಿಯಲ್ಲಿ ಸೋಮವಾರ ಎರಡು ನಾಟಕಗಳ ಚರ್ಚೆ, ಮಧ್ಯಾಹ್ನ 12ಕ್ಕೆ ಜನಪದ ರಂಗ ಪ್ರದರ್ಶನ ಮತ್ತು ಸ್ಥಿತ್ಯಂತರಗಳ ಕುರಿತು ವಿಕ್ರಂ ವಿಸಾಜಿ ಮಾತನಾಡುತ್ತಾರೆ. ನಂತರ ಶ್ರವಣ ಹೆಗ್ಗೋಡು ನಿರ್ದೇಶನದ ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್ ನಾಟಕ, ಮಧ್ಯಾಹ್ನ 3ಕ್ಕೆ ಸಿದ್ದಾಪೂರ ಗುರುಪ್ರಸಾದ ಜನಪದ ತಂಡದಿಂದ ಚೌಡಕಿ ಪದ ಪ್ರಸ್ತುತಿ, ಸಂಜೆ 4ಕ್ಕೆ ಜನ ಚಳುವಳಿ- ಹೋರಾಟದ ಹಾದಿಗಳ ಕುರಿತು ಮಲ್ಲಿಕಾರ್ಜುನ ಮೇಟಿ ಮಾತನಾಡುತ್ತಾರೆ. ಸಂಜೆ 7ಕ್ಕೆ ಮಹದೇವ ಹಪಡದ ಅವರ ಗುಡಿಯ ನೋಡಿರಣ್ಣ ನಾಟಕ ಪ್ರದರ್ಶನದ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.