ಅಭಿವೃದ್ಧಿ ಕಾರ್ಯಕ್ಕೆ ಅಡೆ ತಡೆ ಸಲ್ಲ: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ

| Published : Jun 18 2024, 12:50 AM IST

ಅಭಿವೃದ್ಧಿ ಕಾರ್ಯಕ್ಕೆ ಅಡೆ ತಡೆ ಸಲ್ಲ: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹರಪನಹಳ್ಳಿ: ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗುತ್ತದೆ. ಅಡೆ-ತಡೆ ಮಾಡಿದರೆ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುವುದಿಲ್ಲ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆಯಡಿ ಅನುಮೋದನೆಗೊಂಡ ಹರಪನಹಳ್ಳಿ ಪಟ್ಟಣದ ವಿವಿಧ ಕಾಲೇಜುಗಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಸೋಮವಾರ ಮಾತನಾಡಿದರು.

ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಅಂದಾಜು ವೆಚ್ಚ ₹2.91 ಕೋಟಿಗಳಲ್ಲಿ ಪಟ್ಟಣದ ವಿವಿಧ ಕಾಲೇಜುಗಳಿಗೆ ರಸ್ತೆ, ಎರಡು ಕಡೆಗಳಲ್ಲಿ ಚರಂಡಿ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.

ಈ ವರ್ಷದ ಅಭಿವೃದ್ಧಿ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ನಗರಾಭಿವೃದ್ಧಿ ಯೋಜನೆಯಲ್ಲಿ ₹80 ಕೋಟಿಗೆ ಅನುಮೋದನೆ ಸಿಕ್ಕಿದೆ. ಶೀಘ್ರ ಅನುದಾನ ಬಿಡುಗಡೆಯಾಗುತ್ತದೆ ಎಂದು ಅವರು ನುಡಿದರು.

ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಂಭಕ್ಕೆ ಕ್ರಮ:

ಬಹು ನಿರೀಕ್ಷಿತ ತಾಲೂಕಿನ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಈಗಾಗಲೇ ಈ ಕಾಮಗಾರಿ ಶೇ.60 ಪೂರ್ಣಗೊಂಡಿದ್ದು, ಉಳಿದ ಅನುದಾನ ಬಿಡುಗಡೆಗೊಳಿಸಿ ಈ ವರ್ಷವೇ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ಹಿಂದೆ ಮುಂದೆ ಜನರು ಏಕೆ ಬೇಕು?:

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಹೋಗುವಾಗ ಶಾಸಕರ ಹಿಂದೆ ಮುಂದೆ ಜನರೇ ಇರುವುದಿಲ್ಲ ಎಂದು ಕೆಲವರು ಮಾತನಾಡುತ್ತಾರಂತೆ. ಅಭಿವೃದ್ಧಿ ಕಾರ್ಯಗಳೇ ಮುಖ್ಯ ಹೊರತು ನನ್ನ ಹಿಂದೆ ಮುಂದೆ ಮುಖಂಡರು, ಜನರು ಇರುವುದು ಮುಖ್ಯವಲ್ಲ ಎಂದು ತಮ್ಮ ಟೀಕಾಕಾರರಿಗೆ ಶಾಸಕರು ತಿರುಗೇಟು ನೀಡಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಈ ಹಿಂದೆ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲೂಕು ದಾವಣಗೆರೆಗೆ ಸೇರ್ಪಡೆಗೊಂಡಾಗ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಬಿಟ್ಟು ಹೋಗಿತ್ತು. ಆಗ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಸಿಎಂ ಸಿದ್ದರಾಮಯ್ಯ ಮನವೊಲಿಸಿ ದಾವಣಗೆರೆಯಿಂದ ಹರಪನಹಳ್ಳಿಯನ್ನು ಪುನಃ ಬಳ್ಳಾರಿಗೆ ಸೇರಿಸಿದ್ದರಿಂದ 371 (ಜೆ) ಸೌಲಭ್ಯ ದೊರಕಿ ಇಂದು ಗ್ಯಾರಂಟಿಗಳ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯುವಂತಾಗಿದೆ ಎಂದು ಸ್ಮರಿಸಿದರು.

ಶಾಸಕಿ ಎಂ.ಪಿ. ಲತಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.

ಪುರಸಭಾ ಸದಸ್ಯರಾದ ಟಿ.ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಉದ್ದಾರ ಗಣೇಶ, ಶೋಭಾ, ಗುತ್ತಿಗೆದಾರ ವಿನಯ ಹಿರೇಮಠ, ಆನಂದ ಹಿರೇಮಠ, ಮತ್ತೂರು ಬಸವರಾಜ, ಕವಿತಾ ಸುರೇಶ, ಉಮಾಶಂಕರ, ಗುಂಡಗತ್ತಿ ಕೊಟ್ರಪ್ಪ ಸೇರಿದಂತೆ ಇತರರು ಇದ್ದರು.