ಮತದಾನ ಜಾಗೃತಿಗೆ ಜಿಲ್ಲಾಡಳಿತದಿಂದ ಕ್ರಿಕೆಟ್

| Published : Apr 01 2024, 12:53 AM IST

ಸಾರಾಂಶ

, ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಸುಭದ್ರಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಕೆಸಿಡಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಸುಭದ್ರಗೊಳಿಸುವಂತೆ ಕರೆ ನೀಡಿದರು. ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದ್ದು, ಸುಶಿಕ್ಷಿತರು ತಪ್ಪದೇ ಮತ ಚಲಾಯಿಸಬೇಕು. ಕ್ರಿಕೆಟ್ ಆಡುವ ಮೂಲಕ ವಿನೂತನವಾಗಿ ಮತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಪಂ ಸಿಇಒ ಸ್ವರೂಪಾ ಟಿ.ಕೆ. ಮಾತನಾಡಿ, ಈ ಬಾರಿ ಶೇ. 75ರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಬ್ಯಾಟಿಂಗ್‌ ಮಾಡುವ ಮೂಲಕ ಚಾಲನೆ ನೀಡಿದರು. ಪೊಲೀಸ್ ಕಮಿಷನರ್‌ ರೇಣುಕಾ ಸುಕುಮಾರನ್ ಬೌಲಿಂಗ್ ಬಾಮಾಡಿ ಗಮನ ಸೆಳೆದರು.

ಪೊಲೀಸ್‌ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಜಿಪಂ ಯೋಜನಾಧಿಕಾರಿ ದೀಪಕ ಮಡಿವಾಳರ, ನೌಕರರ ಸಂಘದ ಅಧ್ಯಕ್ಷ ಎಸ್.ಎಫ್‌. ಸಿದ್ಧನಗೌಡರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪಂದ್ಯಾವಳಿಗಳ ಮಧ್ಯೆ ಮತದಾರರ ಜಾಗೃತಿ ಕುರಿತಾದ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು.

ಡಿಸಿ ಕಚೇರಿ ತಂಡ, ಪೊಲೀಸ್‌, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಅಂಗವಿಕಲ, ಯುವ ಸಬಲೀಕರಣ, ಇಲಾಖೆಗಳ ತಂಡ, ಮಾಧ್ಯಮದ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು.