ನಗರದ ಹೊರ ವಲಯದಲ್ಲಿ ಭ್ರೂಣಲಿಂಗ ಪತ್ತೆ ಜಾಲ ಪತ್ತೆ

| Published : Oct 24 2025, 01:00 AM IST

ಸಾರಾಂಶ

- ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ,ಭ್ರೂಣಲಿಂಗ ಪತ್ತೆ ದಂದೆ ನಡೆಸುತ್ತಿದ್ದ ನರ್ಸ್ ಶ್ಯಾಮಲ ಈಕೆಯ ಸಹೋದರ ಗೋವಿಂದರಾಜ್

ಕನ್ನಡಪ್ರಭ ವಾರ್ತೆ ಮೈಸೂರು

ಹೆಣ್ಣು ಭ್ರೂಣಲಿಂಗ ಪತ್ತೆ ಜಾಲದ ಬೇರು ಮೈಸೂರು ಜಿಲ್ಲೆಗೆ ವ್ಯಾಪಿಸಿದೆ. ಮೈಸೂರು- ಬನ್ನೂರು ರಸ್ತೆಯಲ್ಲಿ ಐಷಾರಾಮಿ ಫಾರಂ ಹೌಸ್ ನಲ್ಲಿ ನಡೆಯುತ್ತಿದ್ದ ಭ್ರೂಣಲಿಂಗ ಪತ್ತೆ ಜಾಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ದೀಪಾವಳಿ ಹಬ್ಬದಂದು ಪತ್ತೆ ಹಚ್ಚಿದ್ದಾರೆ.

ಮೈಸೂರು ತಾಲೂಕಿನ ಹಾರೋಹಳ್ಳಿ ಎಲ್ಲೆಯಲ್ಲಿರುವ ಹುನಗನಹಳ್ಳಿಹುಂಡಿ ಸಮೀಪದ ಫಾರಂ ಹೌಸ್‌ ನಲ್ಲಿ ಭ್ರೂಣಲಿಂಗ ಪತ್ತೆ ಜಾಲವು ಕಾರ್ಯಾಚರಣೆ ನಡೆಯುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರ ಸಹಾಯದಿಂದ ದಾಳಿ ನಡೆಸಿ, ಮಹಿಳೆ ಸೇರಿದಂತೆ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಭ್ರೂಣಲಿಂಗ ಪತ್ತೆ ದಂದೆ ನಡೆಸುತ್ತಿದ್ದ ನರ್ಸ್ ಶ್ಯಾಮಲ ಈಕೆಯ ಸಹೋದರ ಗೋವಿಂದರಾಜ್, ಭ್ರೂಣಲಿಂಗ ಪತ್ತೆಗಾಗಿ ಬಂದಿದ್ದ ಮಹಿಳೆಯರ ಪತಿಯರಾದ ಕೆ.ಆರ್. ನಗರದ ಭೇರ್ಯ ಗ್ರಾಮದ ಹರೀಶ್‌ ನಾಯಕ ಮತ್ತು ಮೈಸೂರು ತಾಲೂಕು ಕೆ. ಸಾಲುಂಡಿ ಗ್ರಾಮದ ಶಿವಕುಮಾರ್ ಎಂಬವರು ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಶ್ಯಾಮಲ ಪತಿ ಕಾರ್ತಿಕ್, ಏಜೆಂಟ್ ಪುಟ್ಟರಾಜು ಮತ್ತು ಇತರರು ಪರಾರಿಯಾಗಿದ್ದು, ಪೊಲೀಸರು ಶೋಧ ಮುಂದುವರೆಸಿದ್ದಾರೆ.

ದಾಳಿ ವೇಳೆ ಗರ್ಭೀಣಿಯರ ಪರೀಕ್ಷೆಗೆ ಬಳಸುತ್ತಿದ್ದ ವೈದ್ಯಕೀಯ ಉಪಕರಣಗಳ ಮತ್ತು ಲಾಕರ್‌ ನಲ್ಲಿ ಇರಿಸಿದ್ದ 3 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.

ಇದೇ ವೇಳೆ ಗರ್ಭೀಣಿಯರಿಂದ ಹಣ ಪಡೆದ ಮಾಹಿತಿ ಮತ್ತು ಡೈರಿಯೊಂದನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹಲವಾರು ಮಂದಿ ಪರೀಕ್ಷೆಗೆ ಒಳಗಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಭ್ರೂಣ ಹತ್ಯೆ ನಡೆದಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

ಕಾರ್ಯಾಚರಣೆ

ಮೈಸೂರು- ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಎರಡು ತಿಂಗಳಿಂದ ಕಣ್ಗಾವಲು ಇರಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬುಧವಾರ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.

ಹಾರೋಹಳ್ಳಿ ಎಲ್ಲೆಯಲ್ಲಿರುವ ಹಿಸ್‌ ಹೋಲಿನೆಸ್‌– ಸ್ವಾಮಿ ಶಿವಾನಂದ ಪರಮಹಂಸ ನಿಲಯ ಫಲಕವಿದ್ದ ಬಂಗಲೆಯ ಮೊದಲ ಮಹಡಿಯಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿತ್ತು.

ಮೆಲ್ಲಹಳ್ಳಿ ವೃತ್ತದಲ್ಲಿ ಗರ್ಭಿಣಿಯ ಸೋಗಿನಲ್ಲಿದ್ದ ಪುಟ್ಟಸಿದ್ದಮ್ಮ ಅವರಿಂದ 30 ಸಾವಿರ ಹಣ ಪಡೆದ ಸ್ವಾಮಿ ಎಂಬಾತ, ಕಾರಿನಲ್ಲಿ ಗೋವಿಂದರಾಜು ಎಂಬುವರೊಂದಿಗೆ ಬಂಗಲೆಗೆ ಕಳುಹಿಸಿಕೊಟ್ಟನು. ಮಾರ್ಗ ಮಧ್ಯೆ ರೂಪಾ ಹಾಗೂ ಉಮಾ ಎಂಬ ಮಹಿಳೆಯರು ಹತ್ತಿಕೊಂಡರು. ಉಮಾ ಎಂಬುವರಿಂದಲೂ ಆರೋಪಿಗಳು 25 ಸಾವಿರ ಪಡೆದಿದ್ದರು. ರೂಪಾ ಅವರ ಪತಿ ಹರೀಶ್‌ ನಾಯಕ, ಉಮಾ ಅವರ ಪತಿ ಶಿವಕುಮಾರ್ ಅವರೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು 30 ಸಾವಿರ ಹಣ ನೀಡಿದ್ದರು.

ಮನೆಯ ಮಾಲೀಕರಾದ ಶ್ಯಾಮಲ ಅವರನ್ನು ವಿಚಾರಿಸಿದಾಗ ಈ ಬಗ್ಗೆ ಆರಂಭದಲ್ಲಿ ಗೊತ್ತಿಲ್ಲ ಎಂದಿದ್ದರು. ನಂತರ ಬನ್ನೂರಿನ ಎಸ್‌.ಕೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಆಕೆಯ ಗಂಡ ಕಾರ್ತಿಕ್ ಮತ್ತು ‍ಪುಟ್ಟರಾಜು ಎಂಬುವರೊಂದಿಗೆ ಸೇರಿಕೊಂಡು ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕಾರ್ಯ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ಸಂಬಂಧ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಅವರು ನೀಡಿರುವ ದೂರಿನಂತೆ ವರುಣ ಠಾಣೆಯ ಪೊಲೀಸರು, ಎಂಟಿಪಿ ಕಾಯ್ದೆ, ಪಿಸಿ ಅಂಡ್ ಪಿಎನ್ ಡಿಟಿ ಕಾಯ್ದೆ ಮತ್ತು ಕೆಪಿಎಂಇಎ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಿಸಿಪಿ‌ಎನ್‌ ಡಿಟಿ ಉಪ ನಿರ್ದೇಶಕ ವಿವೇಕ್ ದೊರೈ, ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್‌ ‌ಕುಮಾರ್, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ, ರೇಡಿಯಾಲಜಿಸ್ಟ್ ವಿಜಯಶಾರಧಿ, ಸಿಬ್ಬಂದಿ ಅನಿಲ್‌ ಪಿ. ಥಾಮಸ್, ಎನ್‌. ಅರುಣ್‌ ಕುಮಾರ್‌, ಬಿ. ಮಂಗಳಾ, ಪುಟ್ಟಸಿದ್ಧಮ್ಮ ಭಾಗವಹಿಸಿದ್ದರು.

-----

ಬಾಕ್ಸ್...

ಗ್ರಾಮೀಣ ಗರ್ಭಿಣಿಯರೇ ಟಾರ್ಗೆಟ್

ಆರೋಪಿ ನರ್ಸ್ ಶ್ಯಾಮಲ ಬನ್ನೂರಿನ ಎಸ್.ಕೆ. ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಶ್ಯಾಮಲ, ಇವರ ಪತಿ ಕಾರ್ತಿಕ್, ಸಹೋದರ ಗೋವಿಂದರಾಜು, ಏಜೆಂಟ್ ಪುಟ್ಟರಾಜು ಮೂಲಕ ಗಿರಾಕಿಗಳಿಗೆ ಬಲೆ ಬೀಳಿಸುತ್ತಿದ್ದರು. ಈ ತಂಡವು ಗ್ರಾಮೀಣ ಭಾಗದ ಗರ್ಭಿಣಿಯರನ್ನು ಟಾರ್ಗೆಟ್ ಮಾಡಿದ್ದು, ಸಾವಿರಾರು ಹಣ ಪಡೆದು ಸ್ಕ್ಯಾನಿಂಗ್ ಮಾಡಿ, ಹೊಟ್ಟೆಯಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಹೇಳುತ್ತಿದ್ದರು. ನಂತರ ಹೆಣ್ಣು ಮಗುವಾದರೆ ಗರ್ಭಪಾತ ಮಾಡಿಸುತ್ತಿದ್ದರು. ಇದಕ್ಕೆ ವೈದ್ಯರೊಬ್ಬರು ಸಹಕರಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಭ್ರೂಣ ಲಿಂಗ ಪತ್ತೆಗೆ 25 ಸಾವಿರ ಮತ್ತು ಭ್ರೂಣ ಹತ್ಯೆ 30 ಸಾವಿರ ರೂ. ಪಡೆಯುತ್ತಿದ್ದರು. ಗರ್ಭೀಣಿರ ಕುಟುಂಬಸ್ಥರು, ಪತಿಯವರೊಂದಿಗೆ ಮೊದಲೇ ಹಣದ ವ್ಯವಹಾರ ನಡೆಸಿ ಆ ನಂತರ ಪರೀಕ್ಷೆಗೆ ಒಳಪಡಿಸುತ್ತಿದ್ದರು. ಆಸ್ಪತ್ರೆಯಿಂದ ಕಾರಿನಲ್ಲಿ ಸ್ಕ್ಯಾನಿಂಗ್ ಮಿಷಿನ್ ತಂದು ಭ್ರೂಣ ಪತ್ತೆ ಮಾಡುತ್ತಿದ್ದರು ಎಂದು ಗೊತ್ತಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

-----

ಕೋಟ್...

ಆರೋಗ್ಯ ಇಲಾಖೆಯಿಂದ ಸ್ಕ್ಯಾನಿಂಗ್ ಗೆ ಬರುವ ಗರ್ಭಿಣಿಯರನ್ನು ಮಾನಿಟರ್ ಮಾಡುವ ಮೂಲಕ ಈ ಕಾರ್ಯಾಚರಣೆ ಮಾಡಿದ್ದೇವೆ. ಫಾರಂ ಹೌಸ್ ಗೆ ಗರ್ಭಿಣಿಯರು ಸ್ಕ್ಯಾನಿಂಗ್ ಗೆ ಬಂದಿದ್ದರು. ಅವರ ಪೋಷಕರ ವಿರುದ್ಧವೂ ಕೇಸ್ ದಾಖಲಿಸಿದ್ದೇವೆ. ನರ್ಸ್ ಒಬ್ಬರ ಮುಂದಾಳತ್ವದಲ್ಲಿ ಅಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಆಕೆ ಬನ್ನೂರಿನ ಎಸ್‌.ಕೆ. ಆಸ್ಪತ್ರೆ ಉದ್ಯೋಗಿ. ರೇಡ್ ನಡೆದ ಜಾಗದಲ್ಲಿ ಎಷ್ಟು ದಿನಗಳಿಂದ ಭ್ರೂಣ ಪತ್ತೆ ನಡೆಯುತ್ತಿತ್ತು ಹಾಗೂ ಇಲ್ಲಿಯವರೆಗೆ ಎಷ್ಟು ಭ್ರೂಣ ಹತ್ಯೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

- ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ, ಮೈಸೂರು