ಸಾರಾಂಶ
ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಗದಗ: ಸಾರ್ವಜನಿಕರು ಸ್ವಯಂ ಜಾಗೃತಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ ಎಷ್ಟೋ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ ಎಂದು ಶಹರ ಸಿಪಿಐ ಡಿ.ಬಿ. ಪಾಟೀಲ ಹೇಳಿದರು.ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಹಣ್ಣು, ಹೂವು, ಎಲೆ ಹಾಗೂ ಇತರೆ ಕಿರುಕುಳ ವ್ಯಾಪಾರಸ್ಥರ ಸಂಘ, ಜಿಲ್ಲಾ ಪೊಲೀಸ್, ಶಹರ ಪೊಲೀಸ್ ಠಾಣೆಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಟರ್‌ನೆಟ್, ಆನ್‌ಲೈನ್ ವ್ಯವಹಾರಗಳಿಂದಾಗಿ ಸೈಬರ್ ಕ್ರೈಮ್‌ಗಳು ಹೆಚ್ಚುತ್ತಿವೆ. ವಿದ್ಯಾವಂತರು, ಪದವೀಧರರೂ ಸಹ ಆಸೆ, ಆಮಿಷಕ್ಕೆ ಅಥವಾ ಅತಿಯಾದ ಬುದ್ಧಿವಂತಿಕೆಯಿಂದಾಗಿಯೂ ಮೋಸಕ್ಕೆ ಬಲಿಯಾಗುತ್ತಿರುವದು ದೊಡ್ಡ ದುರಂತ ಎಂದರು.ವ್ಯಾಪಾರಸ್ಥರ ಅಂಗಡಿ-ಮನೆ ಕಳ್ಳತನ ತಡೆಗಟ್ಟುವ ಬಗ್ಗೆ, ಮನೆ ಬಾಡಿಗೆ ಕೊಡುವಾಗ ಪಾಲಿಸಬೇಕಾದ ಕ್ರಮಗಳು, ಸರಗಳ್ಳತನ ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳು, ವಾಹನ ಕಳ್ಳತನ ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳನ್ನು ವಿವರಿಸಿದ ಅವರು, ಉದ್ಯೋಗ, ಆನ್‌ಲೈನ್ ವ್ಯವಹಾರ, ಬಹುಮಾನ, ಲಾಟರಿ ಎಂದೆಲ್ಲಾ ಹೇಳಿ ಮೊಬೈಲ್‌ದಲ್ಲಿ ವ್ಯವಹರಿಸಿ ಬ್ಯಾಂಕ್ ಖಾತೆಯ ಹಣವನ್ನೆಲ್ಲ ಕಳೆದುಕೊಂಡು ಮೋಸ ಹೋಗುತ್ತಿರುವದು ವಿಷಾದದ ಸಂಗತಿ. ಸಾರ್ವಜನಿಕರು ಸ್ವಯಂ ಜಾಗೃತಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವದು ಅವಶ್ಯವೆಂದರು.
ಪಾಲಕ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಬಾರದು. ಅನಿವಾರ್ಯವಾಗಿ ಕೊಟ್ಟರೆ, ಕೊಡಿಸಿದರೆ ಅವರ ಮೊಬೈಲ್‌ಗಳ ಮೇಲೆ ನಿಗಾ ಇಡಬೇಕು. ಅವರ ಸಂಪರ್ಕಗಳ ಮಾಹಿತಿ ಇರಬೇಕು, ಮಕ್ಕಳ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದರೆ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ. ಆಗ ಕಾಲ ಮಿಂಚಿ ಹೋಗಿರುತ್ತದೆ. ಏನೂ ಮಾಡಲಾಗದು ಎಂದು ಪಾಲಕ ಪೋಷಕರಿಗೆ ಎಚ್ಚರಿಕೆ ನೀಡಿದರು.ಈ ವೇಳೆ ಶಹರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಜಿ.ಟಿ. ಜಕ್ಕಲಿ, ಟ್ರಾಫಿಕ್ ಪಿಎಸ್‌ಐಗಳಾದ ಶಕುಂತಲಾ ನಾಯಕ, ಭಾರತಿ ತಳವಾರ, ಭಾರತಿ ಬಂಕಾಪೂರ, ವ್ಯಾಪಾರಸ್ಥರ ಸಂಘದ ಗೌರವ ಅಧ್ಯಕ್ಷ ಶರಣಪ್ಪ ಸಾಸನೂರ, ಅಧ್ಯಕ್ಷ ಅಬ್ದುಲ್‌ರೆಹಮಾನ ಹುಯಿಲಗೋಳ, ಉಪಾಧ್ಯಕ್ಷ ರಾಜೇಸಾಬ ಅಡರಕಟ್ಟಿ, ಕಾರ್ಯದರ್ಶಿ ಶರಣು ಶಿಗ್ಲಿ, ಸಹ ಕಾರ್ಯದರ್ಶಿ ಮೀರಅಲಿ ಢಾಲಾಯತ, ಸದಸ್ಯರಾದ ಎ.ಎನ್. ಅನ್ಸಾರಿ, ರಿಯಾಜ ಅನ್ವರ್ ಖಾಜಿ, ವಿಜಯಕುಮಾರ ಬಾಗಮಾರ, ಗಣಪತಿ ಪಟಗೆ, ವೆಂಕಟರಮನ್ ಗುತ್ತಲ, ಮಹ್ಮದ್‌ಅಲಿ ರೋಣ, ಅಶ್ರಫ್‌ಅಲಿ ನಸಬಿ, ಅಜ್ಜಣ್ಣ ಮುಧೋಳ, ಪಿ.ಎಸ್.ಅರಸಿದ್ದಿ, ಅಶೋಕ ಭಾಂಡಗೆ, ಪರವೇಜ್ ಬೇಲೇರಿ, ತಿಪ್ಪಣ್ಣ ನೋನಾರೆ, ಮಂಜು ಲಕ್ಕುಂಡಿ, ಯಲ್ಲವ್ವ ಉಳ್ಳಿಕಾಶಿ, ಮಹ್ಮದ್‌ಅಲಿ ತಂಬಾಕದ, ರಿಯಾನ್ ಕಾಟಾಪೂರ ಇದ್ದರು.
ಥರ್ಡ್ ಆಯ್‌ದಿಂದ ಚಾಲಕರಲ್ಲಿ ಜಾಗೃತಿವಾಹನ ಚಾಲಕರಿಗೆ ಹೆಲ್ಮೆಟ್, ಸೀಟ್ ಬೆಲ್ಟ್, ಯುನಿಫಾರ್ಮ್ ಚೆಕ್ ಮಾಡಲು ಮೂರನೇ ಕಣ್ಣು ಥರ್ಡ್ ಆಯ್ ಸಿಸಿ ಕ್ಯಾಮೆರಾಗಳು ಅತ್ಯಂತ ಸೂಕ್ಷ್ಮವಾಗಿ ಕೆಲಸ ಮಾಡುವ ಮೂಲಕ ಪೊಲೀಸರೊಂದಿಗೆ ವಾದಿಸುವ, ದಂಡ ಕಡಿಮೆ ಮಾಡಿಸುವ ಪ್ರಮೇಯ ಇಲ್ಲವಾಗಿದೆ. ತಪ್ಪು ಮಾಡಿದವರ ಮನೆ ಬಾಗಿಲಿಗೆ ಪೋಸ್ಟ್‌ದಿಂದ ದಂಡದ ಪತ್ರ ಹೋಗುತ್ತಿವೆ. ತಪ್ಪಿತಸ್ಥರು ದಂಡ ತುಂಬಲು ಠಾಣೆಯಲ್ಲಿ ಸರದಿಯಲ್ಲಿದ್ದಾರೆ. ವಾಹನ ಚಾಲಕರಲ್ಲಿ ಕ್ರಮೇಣ ಜಾಗೃತಿ ಬರುತ್ತಿದೆ. ಥರ್ಡ್ ಐ ದಿಂದ ಗುಣಾತ್ಮಕ ಬದಲಾವಣೆ ಕಾಣುತ್ತಿದೆ ಟ್ರಾಫಿಕ್ ಪಿಎಸ್‌ಐ ಶಕುಂತಲಾ ನಾಯಕ ಹೇಳಿದರು.