ಸಾರಾಂಶ
ಅಂಕೋಲಾದಲ್ಲಿ ಆರೋಗ್ಯ ತಪಾಸಣೆ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಅಂಕೋಲಾ: ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಂತೋಷವನ್ನು ಹಂಚುವ ಕಾಯಕದಲ್ಲಿ ತೊಡಗಬೇಕು. ಪ್ರೀತಿ, ಪ್ರೇಮದ ಹೆಸರಲ್ಲಿ ಯುವಕರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ಅಪಾಯಕಾರಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ, ಸಾಹಿತಿ ಮಾರ್ತಾಂಡಪ್ಪ ಕತ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕ, ರೆಡ್‌ಕ್ರಾಸ್, ಆರೋಗ್ಯ ಇಲಾಖೆ ಹಾಗೂ ತಾಲೂಕು ಸ್ಪೀಪ್ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಮುಖ್ಯವಾಗಿದ್ದು, ಯಾರು ಆಳಬೇಕು ಎಂಬುದನ್ನು ನಿರ್ಧರಿಸುವ ಸುವರ್ಣ ಅವಕಾಶವನ್ನು ಸಂವಿಧಾನ ಪ್ರಜೆಗಳಿಗೆ ನೀಡಿರುತ್ತದೆ. ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಸಾಹಿತಿ ಮಾರ್ತಾಂಡಪ್ಪ ಕತ್ತಿ ಅವರನ್ನು ಗೌರವಿಸಲಾಯಿತು. ಕೆನರಾ ವೆಲ್ಫೆರ್ ಟ್ರಸ್ಟಿನ ಆಡಳಿತಾಧಿಕಾರಿ ಆರ್.ವಿ. ಕೇಣಿ, ತಾಲೂಕು ಸ್ವೀಪ್ ಸಮಿತಿಯ ಮಹೇಶ ಪಾಟೀಲ, ಗುರುಮೂರ್ತಿ ಹೆಗಡೆ ಉಪಸ್ಥಿತರಿದ್ದರು. ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕ ಡಾ. ಅಶ್ವಿನ್ ಆರ್. ಸ್ವಾಗತಿಸಿದರು. ಆರ್ಯಾಪ್ರಭು ಪ್ರಾರ್ಥಿಸಿದರು. ಸೃಷ್ಟಿ ನಾಯಕ ನಿರೂಪಿಸಿದರು. ಎನ್ಎಸ್ಎಸ್ ಅಧಿಕಾರಿ ಆರ್. ಪಿ. ಭಟ್ ವಂದಿಸಿದರು. ಸುಡು ಬಿಸಿಲಲ್ಲೂ ಜಾಥಾಕಾಲೇಜಿನ ನೂರಾರು ವಿದ್ಯಾರ್ಥಿಗಳು ಸುಡು ಬಿಸಿಲನ್ನು ಲೆಕ್ಕಿಸದೇ ‘ನಮ್ಮ ಮತ ನಮ್ಮ ಹಕ್ಕು’ ‘ಕಡ್ಡಾಯ ಮತದಾನ ಮಾಡಿ ಜನತಂತ್ರವನ್ನು ಗೆಲ್ಲಿಸಿ’ ಎಂಬ ಘೋಷಣೆಗಳನ್ನು ಕೂಗುತ್ತಾ ವಂದಿಗೆ ಪಂಚಾಯಿತಿ ವ್ಯಾಪ್ತಿಯ ಆಗೇರ ಕಾಲನಿ ಹಾಗೂ ಹೆದ್ದಾರಿ ಮೂಲಕ ಜಾಥಾ ನಡೆಸಿದರು.
ಬೆಳಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಚನಾ ನಾಯಕ, ಹಿರಿಯ ಪ್ರಸೂತಿ ಅಧಿಕಾರಿ ಲೀಲಾವತಿ ನಾಯ್ಕ, ಸಮುದಾಯ ಆರೋಗ್ಯಾಧಿಕಾರಿ ಪೂಜಾ ನಾಯ್ಕ, ಸಿಬ್ಬಂದಿಗಳಾದ ಸಿದ್ದಯ್ಯ ಹಿರೇಮಠ, ವೀಣಾ ನಾಯ್ಕ ಹಾಗೂ ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು.