ಸಾರಾಂಶ
ಬ್ಯಾಂಕಿನಿಂದ 1400ಕ್ಕೂ ಹೆಚ್ಚು ಮಂದಿಗೆ ಸಾಲ ನೀಡಿ, 28 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ರಘುಪತಿ ಭಟ್ಟರು ಆರೋಪಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ ಎಸ್‌ಐಟಿ., ಇಡಿ, ಸಿಬಿಐ ಅಥವಾ ಯಾವುದೇ ತನಿಖೆಗೆ ಸಿದ್ಧವಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ಆರೋಪ ಸಾಬೀತಾದಲ್ಲಿ ಅಷ್ಟೂ ಮೊತ್ತವನ್ನು ಮರುಪಾವತಿಸಲು ಬ್ಯಾಂಕ್ ಸಿದ್ಧವಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪ ಮಾಡುತ್ತಿರುವ ಮಾಜಿ ಶಾಸಕ ರಘುಪತಿ ಭಟ್ ಅವರು ಮೊದಲು ಸೂಕ್ತ ದಾಖಲೆಗಳನ್ನು ನೀಡಲಿ, ನಂತರ ಮಾತನಾಡಲಿ ಎಂದು ಬ್ಯಾಂಕ್ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸವಾಲು ಹಾಕಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನಿಂದ 1400ಕ್ಕೂ ಹೆಚ್ಚು ಮಂದಿಗೆ ಸಾಲ ನೀಡಿ, 28 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ರಘುಪತಿ ಭಟ್ಟರು ಆರೋಪಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ ಎಸ್‌ಐಟಿ., ಇಡಿ, ಸಿಬಿಐ ಅಥವಾ ಯಾವುದೇ ತನಿಖೆಗೆ ಸಿದ್ಧವಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ಆರೋಪ ಸಾಬೀತಾದಲ್ಲಿ ಅಷ್ಟೂ ಮೊತ್ತವನ್ನು ಮರುಪಾವತಿಸಲು ಬ್ಯಾಂಕ್ ಸಿದ್ಧವಿದೆ. ಸಾಬೀತು ಮಾಡಲು ವಿಫಲವಾದರೆ ಅಷ್ಟು ಮೊತ್ತವನ್ನು ಬ್ಯಾಂಕಿಗೆ ಭರಿಸಲು ರಘುಪತಿ ಭಟ್ಟರು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದರು.ರಘುಪತಿ ಭಟ್ ಮತ್ತು ಇತರರು ಸೇರಿ ಈ ಷಡ್ಯಂತ್ರ ಮಾಡುತಿದ್ದಾರೆ. ಇದರಿಂದ ಬ್ಯಾಂಕಿನ ಘನತೆಗೆ ಧಕ್ಕೆಯಾಗಿದೆ, ಸಹಕಾರಿ ರಂಗಕ್ಕೆ ಅವಮಾನವಾಗಿದೆ. ಆದ್ದರಿಂದ ಅವರ ಮೇಲೆ ಮಾನನಷ್ಟ, ಕ್ರಿಮಿನಲ್ ಹಾಗೂ ನಷ್ಟ ಪರಿಹಾರ ಮೊಕದ್ದಮೆಗಳನ್ನು ಹೂಡಲು ನಿರ್ಧರಿಸಿದ್ದೇವೆ. ಇದು ಕೇವಲ ಮಹಾಲಕ್ಷ್ಮೀ ಬ್ಯಾಂಕ್ ಅಲ್ಲ, ಸಹಕಾರಿ ರಂಗದ ಮೇಲೆ ಸುಳ್ಳು ಆರೋಪ ಮಾಡುವ ಪ್ರತಿಯೊಬ್ಬರಿಗೂ ಪಾಠವಾಗಬೇಕಾಗಿದೆ ಎಂದು ಯಶ್ಪಾಲ್ ಹೇಳಿದರು.ರಘುಪತಿ ಭಟ್ ಹೇಳಿದಂತೆ, ಅವರಿಗೆ ದೂರು ನೀಡಿದ ಸಾಲಗಾರರು ಯಾರೂ ಸಂತ್ರಸ್ತರಲ್ಲ. ಅವರು ಬ್ಯಾಂಕಿನ ಸಾಲ ಪಡೆದು, ಮರಪಾವತಿಸದೇ ಸುಸ್ತಿದಾರರಾಗಿದ್ದು, ಈಗಾಗಲೇ ಅವರ ವಿರುದ್ಧ ನ್ಯಾಯಾಲಯದಿಂದ ಸಾಲ ವಸೂಲಾತಿಗೆ ಆದೇಶವಾಗಿದೆ. ಅವರಿಗೆ ಅನ್ಯಾಯವಾಗಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಬಹುದಿತ್ತು, ಸಹಕಾರಿ ಉಪನಿಬಂಧಕರಿಗೆ ದೂರು ನೀಡಬಹುದಿತ್ತು. 3 ವರ್ಷಗಳ ಹಿಂದಿನ ಸಾಲಕ್ಕೆ ಅವರು ಮಾಜಿ ಶಾಸಕರಿಗೆ ದೂರು ನೀಡಿದ್ದಾರೆ. ನಮ್ಮದು ಹಿಂದುಳಿದ ಸಮುದಾಯದವರ ಬ್ಯಾಂಕ್ ಆಗಿದ್ದು, ಇದರಲ್ಲಿ ರಘುಪತಿ ಭಟ್ ಮಧ್ಯಸ್ಥಿಕೆ ವಹಿಸಲು ಅರ್ಹತೆ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ್ ಸಾಲ್ಯಾನ್, ವೃತ್ತಿಪರ ನಿರ್ದೇಶಕ ಮಂಜುನಾಥ್ ಎಸ್.ಕೆ., ನಿರ್ದೇಶಕ ವಿನಯ್ ಕರ್ಕೇರ, ಎಜಿಎಂ ಶಾರಿಕಾ ಕಿರಣ್, ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.