ಸಾರಾಂಶ
- ಒಕ್ಕಲು ಮಾಡಿದ್ದು ಕಣದಲ್ಲಿಯೇ ನಾಶ
- ಅತೀಯಾದ ಮಳೆಯಿಂದ ಹೆಚ್ಚುತ್ತಿದೆ ಹಾನಿ- ಮಳೆರಾಯನ ಶಪಿಸುತ್ತಿರುವ ರೈತರು
ಕನ್ನಡಪ್ರಭ ವಾರ್ತೆ ಕೊಪ್ಪಳಸತತವಾಗಿ ಎಡಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಟಾವಿಗೆ ಬಂದಿರುವ ಮತ್ತು ಕಟಾವು ಮಾಡಿರುವ ಬೆಳೆ ಅತೀಯಾದ ಮಳೆಯಿಂದಾಗಿ ಹಾನಿಯಾಗುತ್ತಿದ್ದು, ಉಳಿಸಿಕೊಳ್ಳಲು ರೈತರಿಗೆ ದಿಕ್ ತಿಳಿಯದಾಗಿದೆ.
ಹೌದು, ಕಳೆದ ಮೂರು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಆಗಾಗ ಭಾರಿ ಮಳೆಯಾಗುವುದು ಒಂದು ಕಡೆಯಾದರೇ ಹಗಲು, ರಾತ್ರಿ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ. ಇದರಿಂದ ರೈತರ ಬೆಳೆ ಅತೀಯಾದ ತೇವಾಂಶದಿಂದ ಕೊಳೆತು ಹೋಗುತ್ತಿದೆ.ಹಿರೇಹಳ್ಳ ಪ್ರವಾಹದಿಂದಾಗಿ ಅಕ್ಕಪಕ್ಕದ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಯಲ್ಲ ನೀರು ಪಾಲಾಗಿದೆ. ಬಹುತೇಕ ನೀರು ತೇಲಿಕೊಂಡು ಹೋಗಿದೆ. ಈಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಶಿ ಮಾಡಿರುವ ಮಕ್ಕೆಜೋಳ, ಈರುಳ್ಳಿಯನ್ನು ಕಾಪಾಡಿಕೊಳ್ಳಲು ರೈತರು ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ.
ಮಾರುಕಟ್ಟೆಗೆ ತಂದಿರುವ ಬೆಳೆ ಕಾಪಾಡಿಕೊಳ್ಳಲು ತಾಡಪತ್ರೆ ಹೊದಿಕೆ ಹಾಕಿ, ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಅದು ತೇವಾಂಶದಿಂದ ಹೊದಿಕೆ ಹಾಕಿದ್ದರೂ ಅಲ್ಲಿಯೇ ಕುದಿಯುತ್ತಿರುವುದು, ಸಸಿ ನಾಟುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ, ಏನು ಮಾಡುವುದು ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.ಹೊಲದಲ್ಲಿಯೇ ಕೊಳೆಯುತ್ತಿದೆ:ಕಟಾವು ಮಾಡಿರುವ ಈರುಳ್ಳಿ, ಮೆಕ್ಕೆಜೋಳ, ಹತ್ತಿ ಹೊಲದಲ್ಲಿಯೇ ಇದ್ದು, ಆಚೆಯೂ ತರದಂತೆ ಆಗಿದೆ. ಇದನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ತಿಳಿಯುತ್ತಿಲ್ಲ. ಹೊಲದ ತುಂಬಾ ಇರುವ ಈರುಳ್ಳಿ ಅತೀಯಾದ ಮಳೆಯಿಂದ ಅಲ್ಲಿಯೇ ಬಹುತೇಕ ಹಾಳಾಗುತ್ತಿದೆ.ಬಿಡುವಿಗಾಗಿ ಮನವಿ:
ಸತತವಾಗಿ ಸುರಿಯುತ್ತಿರುವ ಮಳೆಯನ್ನು ಶಪಿಸುತ್ತಿರುವ ರೈತರು ಮಳೆದೇವನಲ್ಲಿ ಬಿಡುವುಕೊಡುವಂತೆ ಮನವಿ ಮಾಡುತ್ತಿದ್ದಾರೆ. ನಿನ್ನ ಕೃಪೆಯಿಂದ ಅತ್ಯುತ್ತಮ ಬೆಳೆ ಬಂದಿದೆ. ರಾಶಿ ಮಾಡಿಕೊಳ್ಳುತ್ತೇವೆ. ಬಿಡುವು ಕೊಡಿ ಎಂದು ಕೋರಿಕೊಳ್ಳುತ್ತಿದ್ದಾರೆ. ಆದರೆ, ಮಳೆರಾಯನಿಗೆ ಮಾತ್ರ ಕರುಣೆ ಬರುತ್ತಿಲ್ಲ.ಭರ್ತಿಯಾಗಿರುವ ತುಂಗಭದ್ರಾ:ತುಂಗಭದ್ರಾ ಜಲಾಶಯವೂ ಭರ್ತಿಯಾಗಿದ್ದು, ನದಿಯ ಮೂಲಕ ಅಪಾರ ಪ್ರಮಾಣದ ನೀರು ಹರಿಬಿಡಲಾಗುತ್ತಿದೆ. ಕ್ರಸ್ಟ್ ಗೇಟ್ ಮುರಿದಿದ್ದನ್ನು ದುರಸ್ತಿ ಮಾಡಿರುವುದರಿಂದ ಪೂರ್ಣ ಸಾಮರ್ಥ್ಯದಷ್ಟು ನೀರು ಹಿಡಿದುಕೊಳ್ಳಲು ಆಗುತ್ತಿಲ್ಲ. ಅದನ್ನು ಮೀರಿಯೂ ಒಳಹರಿವು ಹೆಚ್ಚುತ್ತಲೇ ಇರುವುದರಿಂದ ಜಲಾಶಯದಿಂದ ನೀರು ನದಿಗೆ ಹರಿಬಿಡಲಾಗುತ್ತಿದೆ.