ಸಾರಾಂಶ
ಶುಕ್ರವಾರ ತಡರಾತ್ರಿ ಗುಡುಗು ಸಿಡಿಲಿನ ಅಬ್ಬರದ ಜತೆಗೆ ಭಾರಿ ಪ್ರಮಾಣದಲ್ಲಿ ಸುರಿದ ಸ್ವಾತಿ ಮಳೆಗೆ ರೈತರ ಈರುಳ್ಳಿ, ಮೆಕ್ಕೆಜೋಳ, ಹೈಬ್ರೀಡ್ ಜೋಳ ನೀರಿನಲ್ಲಿ ನೆಂದು ಹೋಗಿದೆ. ಅತ್ತ ಇಟ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ನೀರು ಪಾಲಾಗಿದೆ.
ಹೂವಿನಹಡಗಲಿ: ಎಲ್ಲಿ ನೋಡಿದರೂ ನೀರೇ ನೀರು. ಕೊಯ್ಲಿಗೆ ಬಂದಿದ್ದ ಬೆಳೆಗಳೆಲ್ಲಾ ನೀರು ಪಾಲು. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೆಲೆ ಬಂತು ಎಂದು ಲಾಭದ ನಿರೀಕ್ಷೆಯಲ್ಲಿದ್ದ ರೈತರು ಸ್ವಾತಿ ಮಳೆಯ ಅಬ್ಬರದಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳ ಕಟಾವು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶುಕ್ರವಾರ ತಡರಾತ್ರಿ ಗುಡುಗು ಸಿಡಿಲಿನ ಅಬ್ಬರದ ಜತೆಗೆ ಭಾರಿ ಪ್ರಮಾಣದಲ್ಲಿ ಸುರಿದ ಸ್ವಾತಿ ಮಳೆಗೆ ರೈತರ ಈರುಳ್ಳಿ, ಮೆಕ್ಕೆಜೋಳ, ಹೈಬ್ರೀಡ್ ಜೋಳ ನೀರಿನಲ್ಲಿ ನೆಂದು ಹೋಗಿದೆ. ಅತ್ತ ಇಟ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ನೀರು ಪಾಲಾಗಿದೆ.ತಾಲೂಕಿನ ಇಟ್ಟಗಿ ಹೋಬಳಿ ವ್ಯಾಪ್ತಿಯ ಉತ್ತಂಗಿ, ಕೆಂಚಮ್ಮನಹಳ್ಳಿ, ಮಹಾಜನದಹಳ್ಳಿ ಸೇರಿದಂತೆ ತಾಲೂಕಿನ ಇತರೆ ಗ್ರಾಮಗಳಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆ ಜಲಾವೃತ್ತವಾಗಿದೆ. 80 ಎಕರೆಗೂ ಹೆಚ್ಚು ಪ್ರದೇಶದ ಬೆಳೆ ಹಾನಿಯಾಗಿದೆ.
ಈರುಳ್ಳಿ ಬೆಳೆಯಲು ಲಕ್ಷಾಂತರ ಬಂಡವಾಳ ಹಾಕಿದ್ದೇವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದೆ ಎಂದು ಲಾಭದ ನಿರೀಕ್ಷೆಯಲ್ಲಿದ್ದ ನಮಗೆ ಸ್ವಾತಿ ಮಳೆ ಬರ ಸಿಡಿಲಿನಂತೆ ಬಂದು ಬೆಳೆ ಕೊಚ್ಚಿ ಹೋಗಿದೆ. 5 ಎಕರೆ ಈರುಳ್ಳಿಯಲ್ಲಿ 2-3 ಎಕರೆಯಲ್ಲಿ ನೀರು ನಿಂತು ಹಾನಿಯಾಗಿದೆ. ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕೆಂಚಮ್ಮನಹಳ್ಳಿ ಗ್ರಾಮದ ಹಡಗಲಿ ಪ್ರಸಾದ ಒತ್ತಾಯಿಸಿದ್ದಾರೆ.ಪ್ರತಿ ವರ್ಷ ಈರುಳ್ಳಿ ಬೆಳೆಗಾರರು ಮಳೆ ಅಬ್ಬರಕ್ಕೆ ಸಿಲುಕಿ ಲಕ್ಷಾಂತರ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಉತ್ತಮ ಇಳುವರಿ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಬೆಳೆ ಕೊಚ್ಚಿ ಹೋಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಲೂ ರೈತರು ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಸ್ಥಿಯಲ್ಲಿರುವ ರೈತರಿಗೆ ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದೇಶ ಉತ್ತಂಗಿ ಆಗ್ರಹಿಸಿದ್ದಾರೆ.
ಎಲ್ಲ ಕಡೆಗೂ ಮೆಕ್ಕೆಜೋಳ ಕೊಯ್ಲು ನಡೆಯುತ್ತಿದೆ. ಮೆಕ್ಕೆಜೋಳ ಒಣಗಿಸಲು ರಸ್ತೆಯನ್ನೇ ಆಸರೆ ಮಾಡಿಕೊಂಡಿದ್ದಾರೆ. ಒಣಗಲು ಹಾಕಿದ್ದ ಮೆಕ್ಕೆಜೋಳ ನೀರು ಪಾಲಾಗಿದೆ. ಕೈಗೆ ಬಂದಿದ್ದ ಫಸಲು ಮಳೆ ನೀರಿನಲ್ಲಿ ಹೋಮ ಮಾಡಿದ ರೀತಿಯಲ್ಲಿ ಆಗಿದೆ. ಇದರಿಂದ ಫಸಲು ಮೊಳಕೆಯೊಡೆದು ಹಾನಿಯಾಗುತ್ತಿದೆ. ಆದ್ದರಿಂದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಖಂಡ ರೈತರ ಸಂಘದ ತಾಲೂಕಾಧ್ಯಕ್ಷ ಸಿದ್ದಪ್ಪ ಹೊಸಮನಿ ಒತ್ತಾಯಿಸಿದ್ದಾರೆ.