ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ನಾವು ಪ್ರತಿಷ್ಠಾನ ಸಂಸ್ಥೆಯ ಯು ವಿನ್ ಅಕಾಡೆಮಿಯಲ್ಲಿ ಷಟಲ್ ಬ್ಯಾಡ್ಮಿಂಟನ್ ತರಬೇತಿ ಪಡೆದು ಕಾಲೇಜು ಹಂತದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಆಟಗಾರರನ್ನು ಮಹಿಳಾ ಸಮಾಜದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಾವು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸೋಮವಾರಪೇಟೆಯ ಅಕ್ಷಯ್ ಮುರುಳೀಧರ್, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಯಡೂರು ಗ್ರಾಮದ ಧನ್ಯಾ ಸತೀಶ್, ಪುಷ್ಪಾಂಜಲಿ ನಾಗೇಶ್, ಹಿರಿಕರ ಗ್ರಾಮದ ಜೀವಿತ ರಮೇಶ್, ಸೋಮವಾರಪೇಟೆಯ ಲಿಖಿತ್ ಕೃಪಾಲ್ ಅವರನ್ನು ಅವರ ಪೋಷಕರೇ ಸನ್ಮಾನಿಸಿ ಹಾರೈಸಿದರು.ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಅಕ್ಷಯ್ ಅವರು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಧನ್ಯಾ, ಪುಷ್ಪಾಂಜಲಿ ಹಾಗೂ ಜೀವಿತಾ ಅವರು ಅ.೧೫ರಂದು ಮೈಸೂರು ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ. ಲಿಖಿತ್ ಮಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಕೋಚ್ ಗೌತಮ್ ಕಿರಗಂದೂರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರು ಸೌಲಭ್ಯಗಳ ಕೊರತೆಯಿಂದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬ್ಯಾಡ್ಮಿಂಟನ್‌ಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪಟ್ಟಣದಲ್ಲಿ ಸರ್ಕಾರಕ್ಕೆ ಸೇರಿದ ಒಳಾಂಗಣ ಕ್ರೀಡಾಂಗಣವಿಲ್ಲ. ಹಲವು ಪ್ರತಿಭಾವಂತ ಕ್ರೀಡಾಪಟುಗಳು ಅಕಾಡೆಮಿಗಳಲ್ಲಿ ಹಣ ಕೊಟ್ಟು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆಟಗಾರರಿಗೆ ಸರಿಯಾದ ತರಬೇತಿ ಸಿಗದ ಕಾರಣ, ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ತಂಡ ಸೋಲು ಅನುಭವಿಸುವಂತಹ ದುಸ್ಥಿತಿ ಇದೆ ಎಂದು ಗೌತಮ್ ಕಿರಗಂದೂರು ನೋವು ತೋಡಿಕೊಂಡರು.ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯೂ ಮಾತನಾಡಿ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಇದು ಕಲಿಕೆಗೆ ಪೂರಕವಾಗಿದೆ ಎಂದರು.
ನಾವು ಪ್ರತಿಷ್ಠಾನದಿಂದ ದಸರಾ ಹಬ್ಬದ ರಜೆಯಲ್ಲಿ ‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’ ಹೆಸರಿನಲ್ಲಿ ೭ ದಿನಗಳ ಕಾಲ ಮಹಿಳಾ ಸಮಾಜದಲ್ಲಿ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಜೀವನ ಕೌಶಲ್ಯಗಳ ಪರಿಚಯ, ಆರ್ಥಿಕ ಸಾಕ್ಷರತೆ, ನಿಸರ್ಗ ಪ್ರಜ್ಞೆ, ಪರಿಸರ ಕಾಳಜಿ, ಕನ್ನಡ, ಇಂಗ್ಲೀಷ್ ಭಾಷಾ ವ್ಯಾಕರಣದ ಬಗ್ಗೆ ಕಲಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಾಧಕ ಮಕ್ಕಳ ಪೋಷಕರಾದ ಎಸ್.ಎ. ಮುರುಳೀಧರ್, ಶಮಂತಾ ಕೃಪಾಲ್, ಭಾರತಿ ಸತೀಶ್, ರೇಣುಕಾ ರಮೇಶ್, ಯಡೂರು ನಾಗೇಶ್, ಸಾಹಿತಿಗಳಾದ ಶರ್ಮಿಳಾ ರಮೇಶ್, ಸಂಪನ್ಮೂಲ ವ್ಯಕ್ತಿ ಪದ್ಮಾವತಿ ಇದ್ದರು.;Resize=(128,128))
;Resize=(128,128))