ಸ್ಥಳೀಯ ರೈತರು, ರೈತ ಮುಖಂಡರು ಹಾಗೂ ತಾಂತ್ರಿಕ ತಜ್ಞರೊಂದಿಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ನವಲಗುಂದ:

ಮಳೆ ಕೊರತೆಯಿಂದ ಬೆಳೆಹಾನಿ ಆಗಿದ್ದು ಜಿಲ್ಲೆಯ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗುವ ಸಂದರ್ಭ ಬಂದಿದೆ. ಈ ಹಿನ್ನೆಲೆಯಲ್ಲಿ ಬರೀ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಲ್ಲದೇ, ರೈತರು, ಕೃಷಿ ತಜ್ಞರೊಂದಿಗೆ ವಾಸ್ತವ ಅಂಶ ಪರಿಶೀಲಿಸಿ ಬೆಳೆಹಾನಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಜಿಲ್ಲೆಯ ರೈತರು ಈ ಬಾರಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯ ಸುಮಾರು 2.90 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿ ಪೈಕಿ ಶೇ.96ರಷ್ಟು ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಪ್ರಮುಖವಾಗಿ ಸುಮಾರು 45 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೆಸರು ಹಾಗೂ ಉದ್ದು, 40 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಜತೆಗೆ ಸೋಯಾಬೀನ್, ಹತ್ತಿ, ಕಡಲೆಕಾಯಿ, ಕಬ್ಬು, ಈರುಳ್ಳಿ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ಸಹ ಮಳೆ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆಯ ಎಲ್ಲೆಡೆ ಭೇಟಿ ನೀಡಿ ಬೆಳೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಸ್ಥಳೀಯ ರೈತರು, ರೈತ ಮುಖಂಡರು ಹಾಗೂ ತಾಂತ್ರಿಕ ತಜ್ಞರೊಂದಿಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಹೊಲಗಳಲ್ಲಿ ಹಸಿರು ಕಾಣುತ್ತಿದ್ದರೂ ಬೆಳೆಗಳ ಬೆಳವಣಿಗೆ ಸಮರ್ಪಕವಾಗಿಲ್ಲ. ಅಗತ್ಯ ಸಮಯದಲ್ಲಿ ಮಳೆ ಸುರಿಯದ ಪರಿಣಾಮ ಬೆಳೆಗಳು ಕುಂಠಿತ ಬೆಳವಣಿಗೆ ಹೊಂದಿದ್ದು, ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದ್ದರೂ ಅದು ಸಮರ್ಪಕ ಸಮಯದಲ್ಲಿ ಹಾಗೂ ಸಮಾನವಾಗಿ ಸುರಿಯದ ಕಾರಣ ಬೆಳೆಗಳಿಗೆ ಪ್ರಯೋಜನವಾಗಿಲ್ಲ ಎಂದು ಲಾಡ್‌ ಹೇಳಿದರು.

ವಿಮೆ ಮೇಲೆ ಭರವಸೆ:

ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳೆ ವಿಮೆ ಸೇರಿದಂತೆ ಸರ್ಕಾರದಿಂದ ಹಾಗೂ ವಿಮಾ ಸಂಸ್ಥೆಗಳ ಮೂಲಕ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು. ರೈತ ಮುಖಂಡರು ಹಾಗೂ ಶಾಸಕರ ಸಲಹೆಗಳನ್ನು ಸಹ ಸರ್ಕಾರದ ಗಮನಕ್ಕೆ ತರಲಾಗುವುದು. ರೈತರ ಪರವಾಗಿ ಬಂದಿರುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ನಿಗದಿತ ತಾಂತ್ರಿಕ ಮಾನದಂಡಗಳಿದ್ದು, ಅವುಗಳನ್ನು ಅನುಸರಿಸಿ ಮಾತ್ರ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದ ಸಚಿವರು, ಮಳೆಯ ಪ್ರಮಾಣ ಮಾತ್ರವಲ್ಲದೆ, ಬೆಳೆ ಬೆಳವಣಿಗೆಗೆ ಅಗತ್ಯವಾದ ಸಮಯದಲ್ಲಿ ಮಳೆ ಸುರಿದಿದೆಯೇ ಎಂಬ ಅಂಶವೂ ಪ್ರಮುಖವಾಗಿದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಲಾಡ್‌ ಹೇಳಿದರು.

ನಿಯಮ ಸಡಿಲಿಸಿ..

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಅಲ್ಪ ಪ್ರಮಾಣದ ಮಳೆಯಾಗಿದ್ದರೂ ಹೆಸರು ಹಾಗೂ ಹತ್ತಿ ಬೆಳೆಗಳು ಹೊರನೋಟಕ್ಕೆ ಹಸಿರಾಗಿ ಕಂಡರೂ ಒಳಗೆ ಬೆಳೆ ಇಲ್ಲದಂತಾಗಿದೆ. ಹತ್ತಿ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಬರುತ್ತಿಲ್ಲ. ಸಾಮಾನ್ಯವಾಗಿ ಹೆಚ್ಚು ಕಾಯಿ ಬಿಡಬೇಕಾದ ಬೆಳೆ ಈಗ ಕೇವಲ 5ರಿಂದ 10 ಕಾಯಿ ಮಾತ್ರ ಬಿಡುತ್ತಿರುವ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರವು ಪರಿಹಾರ ನೀಡುವ ಸಂದರ್ಭದಲ್ಲಿ ಮಾನದಂಡಗಳನ್ನು ಸ್ವಲ್ಪ ಸಡಿಲಿಸಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಂಕಿ-ಅಂಶ ಸಿದ್ಧಪಡಿಸಬೇಕು ಎಂದು ಮನವಿ ಮಾಡಿದರು.

ಕಳೆದ ಎರಡು ವರ್ಷಗಳಿಂದ ಬೆಳೆ ವಿಮೆ ರೈತರಿಗೆ ಸಿಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಾಸಕರು, ಖಾಸಗಿ ವಿಮಾ ಕಂಪನಿಗಳು ಲಾಭ ಪಡೆಯುವ ಬದಲು ರೈತರಿಗೆ ಸೌಲಭ್ಯ ದೊರೆಯುವಂತೆ ಕ್ರಮಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ರೈತರ ಪರವಾಗಿ ಧ್ವನಿ ಎತ್ತಿ ಪರಿಹಾರ ದೊರಕಿಸುವ ವಿಶೇಷ ಪ್ರಯತ್ನ ಮುಂದುವರಿಸಲಾಗುವುದು ಎಂದರು.

ಧಾರವಾಡ ತಾಲೂಕಿನ ಹಾರೋ ಬೆಳವಡಿ ಮತ್ತು ನವಲಗುಂದ ತಾಲೂಕಿನ ಶಿರೂರ, ಶಿರಕೋಳ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿದ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಕೋನರಡ್ಡಿ ಜತಗೆ ಜಿಲ್ಲಾಧಿಕಾರಿ ಸ್ನೇಹಲ್.ಆರ್, ಜಿಪಂ ಸಿಇಒ ಭುವನೇಶ ಪಾಟೀಲ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಎಸಿ ಪ್ರಭಾವತಿ ಫಕೀರಪುರ, ನವಲಗುಂದ ತಹಸೀಲ್ದಾರ್‌ ಸುಧೀರ ಸಾಹುಕಾರ ಇದ್ದರು. ಈ ಗ್ರಾಮಗಳ ರೈತರ ಹೊಲಗಳಿಗೆ ತೆರಳಿ ಬೆಳೆಗಳ ಸ್ಥಿತಿ ವೀಕ್ಷಿಸಲಾಯಿತು.