ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಹವಾಮಾನಾಧಾರಿತ ಬೆಳೆವಿಮೆ ಅಸಮರ್ಪಕವಾಗಿ ವಿತರಿಸುತ್ತಿರುವ ಬಗ್ಗೆ ಚರ್ಚಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾರ್ಯನಿರ್ವಹಿಸದಿರುವ ಮಳೆ ಮಾಪನ ಯಂತ್ರಗಳು ಹಾಗೂ ಸಕಾಲಿಕವಾಗಿ ಗಮನಹರಿಸದ ಅಧಿಕಾರಿ-ಸಿಬ್ಬಂದಿ ನಿರ್ಲಕ್ಷ್ಯ ಕಾರಣಗಳಿಂದಾಗಿ ಬೆಳೆಹಾನಿಗೊಳಗಾದ ರೈತರಿಗೆ ನಿರೀಕ್ಷಿತ ಪ್ರಮಾಣದ ವಿಮಾ ಮೊತ್ತ ಪಾವತಿಯಾಗದಿರುವುದು ಅತ್ಯಂತ ನೋವಿನ ಸಂಗತಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಹವಾಮಾನಾಧಾರಿತ ಬೆಳೆವಿಮೆ ಅಸಮರ್ಪಕವಾಗಿ ವಿತರಿಸುತ್ತಿರುವ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.
ಅದನ್ನು ಮುಂದಿನ ಒಂದು ವಾರದೊಳಗಾಗಿ ಸಮರ್ಪಕವಾಗಿ ದಾಖಲೆಗಳನ್ನು ಸರಿಪಡಿಸಿಕೊಂಡು ಸಂತ್ರಸ್ಥ ರೈತರಿಗೆ ನ್ಯಾಯೋಚಿತವಾದ ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಸೂಚಿಸಿದರು.ಜಿಲ್ಲೆಯಲ್ಲಿರುವ 280 ಮಳೆ ಮಾಪನ ಯಂತ್ರಗಳಲ್ಲಿ ಶೇ.75ರಷ್ಟು ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಿರುವಾಗ ಮಳೆಮಾಪನದ ದತ್ತಾಂಶ ಸಂಗ್ರಹಿಸುವುದಾದರೂ ಹೇಗೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು, ನೆರೆಯ ಗ್ರಾಪಂಗಳಲ್ಲಿ ಬಿದ್ದಿರುವ ಮಳೆಯ ಅಂದಾಜನ್ನು ಆಧರಿಸಿ, ಮಳೆಯ ಪ್ರಮಾಣವನ್ನು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ಒಂದೊಮ್ಮೆ ನೆರೆಯ ಗ್ರಾಪಂಗಳಲ್ಲಿನ ಮಳೆ ಪ್ರಮಾಣವನ್ನು ಗುರುತಿಸುವುದಾದರೆ ರಸ್ತೆಯ ದೂರವನ್ನಾಧರಿಸಿ ಅಥವಾ ವೈಮಾನಿಕ ದೂರವನ್ನು ಅಂದಾಜಿಸಿ ಮಳೆಯ ಮಾಪನ ಕೇಂದ್ರವನ್ನು ಗುರುತಿಸಲಾಗುವುದು ಎಂಬ ಬಗ್ಗೆ ಅಧಿಕಾರಿಗಳಲ್ಲಿ ನಿಖರವಾದ ಮಾಹಿತಿ ಇಲ್ಲ ಎಂದು ದೂರಿದರು.
ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಪ್ರಮಾಣ, ದತ್ತಾಂಶ ಸಂಗ್ರಹಣೆಯಲ್ಲಿನ ನ್ಯೂನ್ಯತೆಗಳಂತಹ ಅವೈಜ್ಞಾನಿಕವಾದ ಕಾರಣಗಳಿಂದಾಗಿ ಸಂತ್ರಸ್ಥ ರೈತರಿಗೆ ಶೋಷಣೆ ಮಾಡುತ್ತಿರುವುದು ಸೂಕ್ತವಲ್ಲ ಎಂದ ಅವರು, ಸಂಬಂಧಿಸಿದ ಇಲಾಖೆಗಳ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳು ಕೂಡಲೇ ಗಮನಹರಿಸಿ, ವಿತರಿಸಲು ಮುಂದಾಗುವಂತೆ ಸೂಚಿಸಿದರು.ವಿಮಾ ಮೊತ್ತವನ್ನು ಅರ್ಹ ಬೆಳೆಗಾರರಿಗೆ ವಿತರಿಸುವಲ್ಲಿ ಈಗಾಗಲೇ ವಿಳಂಬವಾಗಿದ್ದು, ಪಾವತಿಸುವಂತೆ ಅನೇಕ ಬಾರಿ ಒತ್ತಡ ಹೇರಲಾಗಿತ್ತು. ವಿಳಂಬವಾಗಿಯಾದರೂ ವಿಮಾ ಮೊತ್ತ ಪಾವತಿಸುತ್ತಿರುವುದು ಸಮಾಧಾನ ಎಂದು ಅರಿವಿಗೆ ಬರುವುದರ ಜೊತೆಗೆ ಬೆಳೆಯ ನಷ್ಟವನ್ನು ಅಂದಾಜಿಸಿ, ವಿಮಾ ಮೊತ್ತ ಪಾವತಿಸುವಲ್ಲಿ ಆಗಿರುವ ಲೋಪದ ಬಗ್ಗೆ ಅಸಮಾಧಾನ ಹೊಂದಿರುವುದಾಗಿ ತಿಳಿಸಿದರು.
ಮೊದಲು ಹೋಬಳಿ ಮಟ್ಟದಲ್ಲಿ ಮಳೆಯ ಪ್ರಮಾಣವನ್ನು ಗುರುತಿಸಲಾಗುತ್ತಿತ್ತು. ಪ್ರಸ್ತುತ ಪ್ರತಿ ಗ್ರಾಪಂಯನ್ನು ಒಂದು ಯುನಿಟ್‌ನ್ನಾಗಿ ಗುರುತಿಸಿ, ಮಳೆಮಾಪನ ಮಾಡಲಾಗುತ್ತಿದೆ. ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. ವಿಮೆ ಪರಿಹಾರಕ್ಕೆ ಈ ಹಿಂದಿನ ಸಾಲಿನಲ್ಲಿ ನೀಡಲಾಗುತ್ತಿದ್ದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಅಂದಾಜಿಸಲಾಗಿದೆ. ಅಲ್ಲದೆ ರೈತರು ಈಗಾಗಲೇ ಪಾವತಿಸಿರುವ ವಿಮಾ ಮೊತ್ತದ ಪ್ರಮಾಣಕ್ಕಿಂತ ಕಡಿಮೆ ಆಗಿರುವುದು ಸೋಜಿಗವೆನಿಸಿದೆ ಎಂದರು.ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಅನುಷ್ಠಾನದಲ್ಲಿ ವ್ಯತ್ಯಯಗಳಾಗಿರುವುದು ಬೇಸರವೆನಿಸಿದೆ. ಮಳೆಮಾಪನ ಕೇಂದ್ರಗಳ ನಿಷ್ಕ್ರಿಯತೆಯಿಂದಾಗಿ ರೈತರಿಗೆ ತೀವ್ರ ಪ್ರಮಾಣದ ಅನ್ಯಾಯ ಆಗುತ್ತಿದೆ. ಯೋಜನೆಯ ಸಾರ್ಥಕತೆ ಕಾಣುತ್ತಿಲ್ಲ ಎಂದ ಅವರು, ಸಮಸ್ಯೆಯ ಇತ್ಯರ್ಥಕ್ಕೆ ಅಧಿಕಾರಿಗಳು ಗಮನಹರಿಸಿ. ಮುಂದಿನ ವರ್ಷಕ್ಕೆ ಈ ನ್ಯೂನತೆಗಳು ಮುಂದುವರೆಯದಂತೆಯೂ ಅಧಿಕಾರಿಗಳು ಗಮನಹರಿಸಬೇಕು. ಅಧಿಕಾರಿಗಳು ಸೂಕ್ಷ್ಮವಾಗಿ ಗುರುತಿಸಿ, ಕ್ರಮವಹಿಸಬೇಕು. ನ್ಯೂನತೆ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.
ಜಿಲ್ಲಾಧಿಕಾರಿ ಗುರುದತ್ತಹೆಗಡೆ ಮಾತನಾಡಿ, ಬೆಳೆವಿಮೆ ಪರಿಹಾರ ಮೊತ್ತವನ್ನು ಸಂಗ್ರಹಿಸಲು ಪಂಚಾಯಿತಿವಾರು ಮಳೆ ವರದಿಯ ದತ್ತಾಂಶವನ್ನು ಪರಿಗಣಿಸಲಾಗುವುದು. ನೆರೆಯ ಜಿಲ್ಲೆಗಳಲ್ಲಿಯೂ ಇದೇ ರೀತಿಯ ವೆತ್ಯಾಸಗಳಾಗಿರುವುದನ್ನು ಗಮನಿಸಲಾಗಿದೆ. ಅಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ ಸರ್ಕಾರಕ್ಕೆ ವಾಸ್ತವ ವಿಷಯದ ಮನವರಿಕೆ ಮಾಡಿಕೊಡಲಾಗುವುದು ಎಂದರು.ಅಲ್ಲದೇ ಮಳೆಮಾಪನ ಉಸ್ತುವಾರಿಗಾಗಿ ವಿಮಾ ಕಂಪನಿಗಳವರು ಪ್ರತಿನಿಧಿಯೊಬ್ಬರನ್ನು ನಿಯೋಜಿಸುವಂತೆ ಹಾಗೂ ಈ ಹಿಂದೆ ರೈತರಿಗೆ ನೀಡಲಾಗುತ್ತಿದ್ದ ಮೊಬೈಲ್ ಸಂದೇಶವನ್ನು ಪುನಃ ಕಳಿಸಲು ಏರ್ಪಾಡು ಮಾಡುವಂತೆ ಒತ್ತಾಯಿಸಲಾಗುವುದು. ಪ್ರಸ್ತುತ ಸಾಲಿನಲ್ಲಿ ಸರ್ಕಾರವು ರಾಜ್ಯದಲ್ಲಿ 2500ಕ್ಕೂ ಹೆಚ್ಚಿನ ಮಳೆ ಮಾಪನ ಯಂತ್ರಗಳನ್ನು ಅಗತ್ಯವಿರುವಲ್ಲಿ ಅನುಷ್ಟಾನಗೊಳಿಸಲಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ್, ಕೆ.ಎಸ್.ಗುರುಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಎ.ಬಿ.ಸಂಜಯ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್, ವಿಮಾ ಕಂಪನಿಯ ಮುಖ್ಯಸ್ಥ ಅಜಿತ್ ಮತ್ತಿತರರು ಇದ್ದರು.