ಬೆಳೆ ವಿಮೆ ಹಗರಣ ತನಿಖೆ ವಿಳಂಬ; ರೈತರ ಆಕ್ರೋಶ

| Published : May 28 2024, 01:09 AM IST

ಸಾರಾಂಶ

ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 15ದಿನ ಕಳೆದರೂ ಪ್ರಕರಣದ ತನಿಖೆಯಾಗಲಿ, ಆರೋಪಿಗಳ ಬಂಧನವಾಗಲಿ ನಡೆಯದೇ ಇರುವುದು ಕುತೂಹಲ ಮೂಡಿಸಿದೆ

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನ ಜಾಲಹಳ್ಳಿ ಮತ್ತು ಗಾಣದಾಳ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ವಿಮೆ ಹಗರಣದ ತನಿಖೆ ವಿಳಂಬವಾಗುತ್ತಿದ್ದು, ಪ್ರಕರಣ ದಾಖಲಾದರೂ ಕ್ರಮ ಜರುಗದೇ ಇರುವದು ಆಶ್ಚರ್ಯ ಮೂಡಿಸಿದೆ ಎಂದು ರೈತರು ಆರೋಪಿಸಿದ್ದಾರೆ.

2021-22ನೇ ಸಾಲಿನ ಬೆಳೆವಿಮೆ ಎರಡು ಗ್ರಾಪಂ ವ್ಯಾಪ್ತಿ 275 ರೈತರಿಗೆ ಸುಮಾರು ₹1 ಕೋಟಿ 39ಲಕ್ಷ ಬಿಡುಗಡೆಯಾಗಿದೆ. ಇದರಲ್ಲಿ 116 ರೈತರ ಜಮೀನುಗಳ ಸ.ನಂ. ದುರ್ಬಳಕೆ ಮಾಡಿಕೊಂಡು 36 ಜನರು ₹79,91,000 ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 15ದಿನ ಕಳೆದರೂ ಪ್ರಕರಣದ ತನಿಖೆಯಾಗಲಿ, ಆರೋಪಿಗಳ ಬಂಧನವಾಗಲಿ ನಡೆಯದೇ ಇರುವುದು ಕುತೂಹಲ ಮೂಡಿಸಿದೆ.

ವ್ಯವಸ್ಥಿತ ಜಾಲ:ವಿಮೆ ಕಂಪನಿ ಕೆಲ ಸಿಬ್ಬಂದಿ ಹಾಗೂ ಮಧ್ಯವರ್ತಿ ಸೇರಿಕೊಂಡು ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ ಎನ್ನಲಾಗಿದ್ದು, ಬೇರೆಯವರ ಜಮೀನಿನ ಮೇಲೆ ಹಣ ಪಡೆದ 36 ವಂಚಕರನ್ನು ಮಾತ್ರ ಗುರುತಿಸಲಾಗಿದೆ. ಆದರೆ ಅರ್ಹ ರೈತರಲ್ಲಿಯೂ ಕೂಡ ಮಧ್ಯವರ್ತಿಗಳು 50;50 ಮಾದರಿಯಲ್ಲಿ ಹಣ ಪಡೆದಿದ್ದಾರೆ ಎಂದು ದೂರಿದ್ದಾರೆ. ಆದರೆ ದಾಖಲಾದ ಪ್ರಕರಣದಲ್ಲಿ ಈ ಮಧ್ಯವರ್ತಿ ಪಾರಾಗಿರುವದು ಆಶ್ಚರ್ಯ ಮೂಡಿಸಿದೆ. ಮಧ್ಯವರ್ತಿ ಹಾಗೂ ಸಹಕರಿಸಿದ ವಿಮೆ ಕಂಪನಿ ಸಿಬ್ಬಂದಿಯನ್ನು ಈ ಪ್ರಕರಣದಲ್ಲಿ ಸೇರ್ಪಡೆಗೊಳಿಸದರೆ ಮಾತ್ರ ಇಡೀ ಹಗರಣದ ತಿರುಳು ಹೊರಬರಲಿದೆ ಎಂದು ತಿಳಿಸಿದ್ದಾರೆ.

ತನಿಖೆ ವಿಳಂಬ: ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ವಿಮೆ ಕಂಪನಿ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದೆ. ಕೃಷಿ ಇಲಾಖೆ ಪ್ರಕರಣ ಮಾತ್ರ ದಾಖಲಿಸಿ ಕೈತೊಳೆದುಕೊಂಡಿದೆ. ಪೊಲೀಸರು ಸೂಕ್ತ ದಾಖಲೆಗಳಿಗಾಗಿ ಹಡುಕಾಟ ನಡೆಸಿದ್ದಾರೆ. ತನಿಖೆ ವಿಳಂಬಕ್ಕೆ ಮೂಲ ಕಾರಣ ತಿಳಿದು ಬಂದಿಲ್ಲ. ಕೃಷಿ ಇಲಾಖೆ, ಬೆಳೆ ವಿಮೆ ಕಂಪನಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪ್ರಕರಣದ ತನಿಖೆಗೆ ಮುಂದಾಗಬೇಕಾಗಿದೆ.

ರಾಜ್ಯದಲ್ಲಿ ಇಂಥ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದ್ದು, ಕೃಷಿ ಇಲಾಖೆ ಹಾಗೂ ಕೃಷಿ ಸಚಿವರು ಅಲಕ್ಷ್ಯವಹಿಸಿದ್ದಾರೆ. ಅನೇಕ ಬಾರಿ ಮನವಿ ನೀಡಿ, ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕಳೆದ 5ವರ್ಷಗಳಲ್ಲಿ ಬಿಡುಗಡೆಯಾದ ವಿಮೆ ಹಣದ ತನಿಖೆಯಾಗಬೇಕಾಗಿದೆ. ಲೋಕಸಭಾ ಚುನಾವನಾ ಫಲಿತಾಂಶ ಬಂದ ಬಳಿಕ ಹೋರಾಟ ತೀವ್ರಗೊಳಿಸಲಾಗುವದು.

ಚಾಮರಸ ಮಾಲಿ ಪಾಟೀಲ್, ಗೌರವಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ

ಜಾಲಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಬೆಳೆವಿಮೆ ವಂಚನೆ ಪ್ರಕರಣದ ತನಿಖೆ ಪ್ರಾರಂಭಗೊಂಡಿದೆ. ಅಗತ್ಯ ದಾಖಲೆ ಪಡೆದು ಸೂಕ್ತ ತನಿಖೆ ಪ್ರಾರಂಭಗೊಳಿಸಲಾಗುವದು. ಯಾವುದೇ ಒತ್ತಡವಿಲ್ಲ, ರೈತರಿಗೆ ನ್ಯಾಯ ಕೊಡಿಸುವದೇ ಇಲಾಖೆ ಮುಖ್ಯ ಧ್ಯೇಯ, ಶೀಘ್ರದಲ್ಲಿಯೇ ಆರೋಪಿಗಳ ಬಂಧನ ಮಾಡಲಾಗುವದು.

ದತ್ತಾತ್ರೇಯ ಕಾರ್ನಡ, ಡಿವೈಎಸ್ಪಿ ಲಿಂಗಸುಗೂರ.