ಸಾರಾಂಶ
-ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಂಘದಿಂದ ತಹಸೀಲ್ದಾರರಿಗೆ ಮನವಿ
------45 ಕಾಮಗಾರಿಗಳ ದುರಸ್ತಿ ಹೆಸರಲ್ಲಿ 6 ಕೋಟಿ ಗೂ ಹೆಚ್ಚಿನ ಹಣ ಲೂಟಿ: ಆರೋಪ
-----ಕನ್ನಡಪ್ರಭ ವಾರ್ತೆ ಶಹಾಪುರ
2022-23ರಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಉಪ ವಿಭಾಗ ವತಿಯಿಂದ ಶಹಾಪುರ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಾದ ರಸ್ತೆ, ಸೇತುವೆ ದುರಸ್ತಿ ಅನುದಾನದಲ್ಲಿ 6 ಕೋಟಿಗೂ ಅಧಿಕ ಮೊತ್ತದ ಹಣವನ್ನು ಇಲಾಖೆಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿ ಮಾಡದೆ ಬೋಗಸ್ ಕಾಮಗಾರಿಗಳ ಹೆಸರಿನಲ್ಲಿ ಬಿಲ್ ಮಾಡಿಕೊಂಡು ಕೋಟ್ಯಂತರ ಹಣ ವಂಚಿಸಿದ್ದಾರೆಂದು ಆರೋಪಿಸಿರುವ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ, ಈ ಬೋಗಸ್ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಹಸಿಲ್ದಾರಗೆ ಮನವಿ ಪತ್ರ ಸಲ್ಲಿಸಿದರು.ಸಂಘದ ಅಧ್ಯಕ್ಷ ಪ್ರದೀಪ ಅಣಬಿ ಮಾತನಾಡಿ, 2022-2023 ರಲ್ಲಿ ಕೆ.ಆರ್.ಐ.ಡಿ.ಎಲ್ ಉಪ ವಿಭಾಗದಿಂದ ಶಹಾಪುರ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಾದ ರಸ್ತೆ, ಸೇತುವೆ ದುರಸ್ತಿ ಗಾಗಿ ಎಫ್.ಡಿ.ಆರ್ ಅನುದಾನದಲ್ಲಿ 45 ಕಾಮಗಾರಿಗಳ ಹೆಸರಿನಿಂದ ಆರು ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ಲೂಟಿಯಾಗಿವೆ. 6 ಕೋಟಿಗೂ ಅಧಿಕ ಮೊತ್ತದ ಹಣವನ್ನು ಇಲಾಖೆಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಾಮಗಾರಿಗಳನ್ನೇ ಮಾಡದೆ ಬೋಗಸ್ ಕಾಮಗಾರಿ ಹೆಸರಿನಲ್ಲಿ ಬಿಲ್ ಮಾಡಿಕೊಂಡು ಕೋಟ್ಯಂತರ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಈ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ನ. 13 ರಂದು ಹಾಗೂ ಯಾದಗಿರಿ ಜಿಲ್ಲಾಧಿಕಾರಿಯವರಿಗೆ ಡಿ.31 ರಂದು ದೂರು ಸಲ್ಲಿಸಲಾಗಿದೆ. ಸಾರ್ವಜನಿಕರ ಹಣವನ್ನು ಈ ರೀತಿಯಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಜನಪ್ರತಿನಿಧಿಗಳು ರಾಜರೋಷವಾಗಿ ಹಗಲು ದರೋಡೆ ನಡೆಸಿದ್ದಾರೆ. ಎಂಜಿನೀಯರ್‌ಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಸರ್ಕಾರಿ ಹಣ ಲೂಟಿ ಮಾಡಿದ್ದನ್ನು ಜಿಲ್ಲಾಧಿಕಾರಿ ಕೂಡಲೇ ತನಿಖಾ ತಂಡ ರಚಿಸಿ ಅಕ್ರಮಗಳ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಧರಣಿ ನಡೆದಾಗ ಮನವಿ ಪತ್ರ ತೆಗೆದುಕೊಂಡು ತನಿಖೆ ಮಾಡಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕಳಿಸುತ್ತೀರಿ. ಆದರೆ, ಇಲ್ಲಿಯವರೆಗೆ ತನಿಖೆ ಆಗಿರುವುದು ಒಂದೇ ಒಂದು ಉದಾಹರಣೆ ಇಲ್ಲ. ಧರಣಿ ನಡೆಸುವ ಮುಂಚೆ ನಿಮಗೆ ಮತ್ತೊಮ್ಮೆ ದೂರು ಸಲ್ಲಿಸುತ್ತಿದ್ದೇವೆ. ತಕ್ಷಣ ಅಕ್ರಮ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ತಹಸೀಲ್ದಾರರನ್ನು ಒತ್ತಾಯಿಸಿದರು.
ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಸುರೇಶ ಕಟ್ಟಿಮನಿ, ಶರಣು ದಿಗ್ಗಿ ಭಾಗಿಯಾಗಿದ್ದರು.------ಫೋಟೊ: ಶಹಾಪುರ ಮತಕ್ಷೇತ್ರದಲ್ಲಿ 6 ಕೋಟಿ ಮೊತ್ತದ ಬೋಗಸ್ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
3ವೈಡಿಆರ್16