ಹೊಸ ವರ್ಷದಂದು ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು!

| Published : Jan 02 2025, 12:30 AM IST

ಹೊಸ ವರ್ಷದಂದು ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು!
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ವರ್ಷದ ಮೊದಲ ದಿನವಾದ ಬುಧವಾರ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ಬಂಡೀಪುರ ಸಫಾರಿಯಲ್ಲಿ ಪ್ರವಾಸಿಗರ ದಂಡೇ ಬೀಡು ಬಿಟ್ಟಿತ್ತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಹೊಸ ವರ್ಷದ ಮೊದಲ ದಿನವಾದ ಬುಧವಾರ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟ, ಬಂಡೀಪುರ ಸಫಾರಿಯಲ್ಲಿ ಪ್ರವಾಸಿಗರ ದಂಡೇ ಬೀಡು ಬಿಟ್ಟಿತ್ತು.

ಹೊಸ ವರ್ಷದ ಮುನ್ನ ದಿನ ವರ್ಷಾಚರಣೆಗೆ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ ಜನರು ಗುಂಡ್ಲುಪೇಟೆ, ಬಂಡೀಪುರ ಅರಣ್ಯದಂಚಿನ ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ಬೀಡು ಬಿಟ್ಟಿದ್ದರು. ಬುಧವಾರ ಮುಂಜಾನೆ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಬೆಟ್ಟಕ್ಕೆ ತೆರಳಿ, ಗೋಪಾಲನ ದರ್ಶನ ಪಡೆದರು. ಹಿಮದ ಸವಿಯನ್ನು ಸವಿದು ತೆರಳುತ್ತಿದ್ದ ದೃಶ್ಯ ಬೆಟ್ಟದಲ್ಲಿ ಕಂಡು ಬಂತು.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್ ಮಾಡಿದ ಪ್ರವಾಸಿಗರು ಮಧ್ಯಾಹ್ನದ ವೇಳೆಗೆ ಪ್ರವಾಸಿಗರ ಸಂಖ್ಯೆ ಏರಿಕೆ ಕಂಡಿತು.

೨೦ ಹೆಚ್ಚುವರಿ ಬಸ್‌:

ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ದಿನ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಕಂಡು ಘಟಕ ವ್ಯವಸ್ಥಾಪಕ ತ್ಯಾಗರಾಜ್‌ ೨೦ ಹೆಚ್ಚುವರಿ ಬಸ್‌ ಬಿಟ್ಟು ಪ್ರವಾಸಿಗರು ತೆರಳಲು ಅವಕಾಶ ಕಲ್ಪಿಸಿದ್ದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ ಕುಮಾರ್‌, ಘಟಕ ವ್ಯವಸ್ಥಾಪಕ ತ್ಯಾಗರಾಜು, ಡಿಟಿಒ ದಶರಥ್‌ ಕೂಡ ಬೆಟ್ಟದ ತಪ್ಪಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಪಾಲಸ್ವಾಮಿ ಬೆಟ್ಟ ಹೊರತು ಪಡಿಸಿ ತೆರಕಣಾಂಬಿ ಬಳಿ ಹುಲಗಿನಮುರುಡಿ ಪಾರ್ವತಿ ಬೆಟ್ಟ ಹಾಗೂ ತ್ರಿಯಂಬಕಪುರದ ತ್ರಿಯಂಬಕೇಶ್ವರ ದೇವಸ್ಥಾನ ಹಾಗೂ ಗುಂಡ್ಲುಪೇಟೆ ಬಳಿ ಕಬ್ಬೇಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರು ಮುಖ ಮಾಡಿದ್ದರು.

ಸಫಾರಿಲೂ ಜನವೋ ಜನ!:

ಗೋಪಾಲಸ್ವಾಮಿ ಬೆಟ್ಟ, ಹುಲಗಿನ ಮುರಡಿ ಹಾಗೂ ಊಟಿಗೆ ತೆರಳಿ ವಾಪಸ್ ಬರುವ ಪ್ರವಾಸಿಗರು ಸಹ ಸಫಾರಿಗೆ ತೆರಳಲು ಬುಧವಾರ ಸಂಜೆ ಪ್ರವಾಸಿಗರು ಮುಗಿ ಬಿದ್ದಿದ್ದರು. ರಜಾ ಮುಗಿಸಿ ನಗರದತ್ತ ಪ್ರಯಾಣ ಬೆಳೆಸುವ ಮಂದಿ ಬಂಡೀಪುರ ಸಫಾರಿಯಲ್ಲಿ ಒಂದು ರೌಂಡ್ ಹಾಕಿ ಮನೆಗೆ ತೆರಳುವ ಸಲುವಾಗಿ ಬುಧವಾರ ಸಂಜೆ ಸಫಾರಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು.ಸಾರಿಗೆ ಸಂಸ್ಥೆಗೆ ₹೫.೮೦ ಲಕ್ಷ,

ಸಫಾರೀಲಿ 7 ಲಕ್ಷ ಆದಾಯ

ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದಂದು ಕನಿಷ್ಠ ಹತ್ತು ಸಾವಿರ ಮಂದಿ ಪ್ರಯಾಣ ಬೆಳೆಸಿದ್ದು, ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿಗೆ ₹೫.೮೦ ಲಕ್ಷ ಆದಾಯ ಬಂದಿದೆ. ಟ್ರಾಫಿಕ್‌ ಕಂಟ್ರೋಲರ್‌ ನೇನೇಕಟ್ಟೆ ವಿಜಯಕುಮಾರ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದು, ಗೋಪಾಲಸ್ವಾಮಿ ಬೆಟ್ಟಕ್ಕೆ ೨೦ ಸಾರಿಗೆ ಬಸ್‌ ಸಂಚರಿಸಿವೆ. ಅಲ್ಲದೆ ಕೆಲ ಜೀಪುಗಳೂ ಸಂಚರಿಸಿವೆ ಎಂದರು. ಸಾರಿಗೆ ಸಂಸ್ಥೆಗೆ ೫.೮೦೭೦೮ ರು ಆದಾಯ ಬಂದಿದೆ.ಗೋಪಾಲಸ್ವಾಮಿ ಬೆಟ್ಟಕ್ಕೆ ೯ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಂಡೀಪುರ ಸಫಾರಿಯಲ್ಲಿ ಹೊಸ ವರ್ಷದ ದಿನ ಸುಮಾರು7 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ ಎಂದು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ತಿಳಿಸಿದ್ದಾರೆ.