ಮುಂಡರಗಿಯ ವೀರಭದ್ರೇಶ್ವರ ಕಾರ್ತಿಕೋತ್ಸವಕ್ಕೆ ಜನಸಾಗರ

| Published : Nov 19 2025, 01:15 AM IST

ಸಾರಾಂಶ

ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರು ಕಾರ್ತಿಕೋತ್ಸವ ಮಹಾಮಂಗಲೋತ್ಸವಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.

ಮುಂಡರಗಿ: ಉತ್ತರ ಕರ್ನಾಟಕದ‌ ಸುಪ್ರಸಿದ್ದ ಸಿಂಗಟಾಲೂರು ವೀರಭದ್ರೇಶ್ವರ ಕಾರ್ತಿಕೋತ್ಸವದ ಮಹಾಮಂಗಲೋತ್ಸವ ಸೋಮವಾರ ರಾತ್ರಿ ಜರುಗಿತು. ಕಾರ್ಯಕ್ರಮಕ್ಕೆ ಭಕ್ತಸಾಗರವೇ ಹರಿದುಬಂದಿತ್ತು.

ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರು ಕಾರ್ತಿಕೋತ್ಸವ ಮಹಾಮಂಗಲೋತ್ಸವಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿ, ಈ ಭಾಗದ ಆರಾಧ್ಯದೈವ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವವು ತಿಂಗಳು ಪೂರ್ತಿ ಅತ್ಯಂತ ವಿಜೃಂಭಣೆಯಿಂದ ಜರುತ್ತಿದ್ದು, ಮಹಾಮಂಗಲವಾಗಲಿದೆ ಎಂದರು.

ಸಿಂಗಟಾಲೂರು ವೀರಭದ್ರೇಶ್ವರ ಸ್ವಾಮೀಜಿಗೆ ರಾಜ್ಯಾದ್ಯಂತ ಭಕ್ತರಿದ್ದು, ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ಜರುಗುವ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕ ಮಾಸದಲ್ಲಿ ಜನಸಾಗರವೇ ಹರಿದು ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಿತ್ಯವೂ ಟ್ರಸ್ಟ್‌ ಸಮಿತಿ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಅಮವಾಸ್ಯೆಗೂ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಬರುವ ಭಕ್ತರಿಗೆ ವಸತಿ ವ್ಯವಸ್ಥೆಗಾಗಿ ವಸತಿಗೃಹಗಳನ್ನು ಸಹ ನಿರ್ಮಿಸಲಾಗಿದೆ. ದೇವಸ್ಥಾನದ ವತಿಯಿಂದ ಕಲ್ಯಾಣಮಂಟಪ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಕಾಮಗಾರಿ ಭರದಿಂದ ಸಾಗಿದೆ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಶೇಖಣ್ಣ ಬಾಲೆಹೊಸೂರ, ಸದಸ್ಯರಾದ ಕೊಟ್ರೇಶ ಬಳ್ಳೊಳ್ಳಿ, ಕರ್ಣಂ ಸಣ್ಣತಮ್ಮಪ್ಪ, ಸುಭಾಸಪ್ಪ ಬಾಗೇವಾಡಿ, ಕಾಶಯ್ಯ ಬೆಂತೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ತಿಕೋತ್ಸವದ ಮಹಾಮಂಗಲದ ಅಂಗವಾಗಿ ನಾಡಿನಾದ್ಯಂತ ಆಗಮಿಸಿದ್ದ ಸಾವಿರಾರು ಭಕ್ತರು ಕಾರ್ತಿಕ ಹಚ್ವಿ ಸರದಿ ಸಾಲಿನಲ್ಲಿ ನಿಂತು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು.