ಎನ್‌ಜಿಒ ಸೃಷ್ಟಿಸಿ ಸಿಎಸ್ಸಾರ್‌ ನಿಧಿ ಬೇಕಾಬಿಟ್ಟಿ ಬಳಕೆ ಸಲ್ಲ

| Published : Aug 28 2024, 12:53 AM IST

ಎನ್‌ಜಿಒ ಸೃಷ್ಟಿಸಿ ಸಿಎಸ್ಸಾರ್‌ ನಿಧಿ ಬೇಕಾಬಿಟ್ಟಿ ಬಳಕೆ ಸಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

CSSR fund created by NGO is not allowed to be used

-ಗಣಿ ಕಂಪನಿ ಪ್ರತಿನಿಧಿಗಳ ತರಾಟೆಗೆ ತೆಗೆದುಕೊಂಡ ಸಂಸದ ಗೋವಿಂದ ಕಾರಜೋಳ । ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ವಿನಿಯೋಗಿಸಲು ತಾಕೀತು

------

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಎನ್‍ಜಿಒ ಗಳನ್ನು ತಾವೇ ಸೃಷ್ಟಿಸಿಕೊಂಡು, ತಮಗೆ ಬೇಕಾದ ಏಜೆನ್ಸಿಗಳಿಗೆ ಸಿಎಸ್ ಆರ್ ನಿಧಿ ಬಳಕೆ ಮಾಡೋ ಕೆಲಸ ಇನ್ಮುಂದೆ ನಡೆಯೋಲ್ಲ. ಜಿಲ್ಲೆಯಲ್ಲಿರುವ ಗಣಿ ಕಂಪನಿಗಳು ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ನೀಡುವ ಜೊತೆಗೆ ಜಿಲ್ಲೆಯಲ್ಲಿನ ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಕೊಡುಗೆ ನೀಡಬೇಕು. ಸಿಎಸ್‍ಆರ್ ನಿಧಿ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿಯೇ ಖರ್ಚಾಗಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗಣಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 7 ಖಾಸಗಿ ಗಣಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸಿಎಸ್ ಆರ್ (ಸಾಮಾಜಿಕ ಹೊಣೆಗಾರಿಕೆ) ನಿಧಿ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಿಗೆ ಸಮರ್ಪಕ ಬಳಕೆಯಾಗುತ್ತಿಲ್ಲ. ಗಣಿ ಕಂಪನಿಗಳು ಇತರೆ ರಾಜ್ಯಗಳಲ್ಲಿ ಸಿಎಸ್‍ಆರ್ ಹಣ ಖರ್ಚು ಮಾಡಿ, ಇಲ್ಲಿನ ಲೆಕ್ಕಕ್ಕೆ ತೋರಿಸುತ್ತಿವೆ. ಕಂಪನಿಗಳೇ ಎನ್‍ಜಿಒ ಗಳನ್ನು ಸೃಷ್ಟಿಸಿ, ತಮಗೆ ಬೇಕಾದ ಏಜೆನ್ಸಿಗಳಿಗೆ ಹಣ ನೀಡುತ್ತಿರುವುದಾಗಿ ಸಾಕಷ್ಟು ದೂರುಗಳು ಬಂದಿವೆ. ಇಂತಹ ಆಟ ಬಂದ್ ಮಾಡಿ ಎಂದು ತಾಕೀತು ಮಾಡಿದರು.

ಅದಿರು ತುಂಬಿದ ಲಾರಿಗಳ ಸಂಚಾರದಿಂದ ರಸ್ತೆ ಹಾಳಾಗಿವೆ. ಮನೆಗಳಲ್ಲಿ ಧೂಳು ತುಂಬಿಕೊಂಡು ಬದುಕು ದುಸ್ತರವಾಗಿದೆ ಎಂದು ಗ್ರಾಮೀಣರು ರಸ್ತೆ ಬಂದ್ ಮಾಡಿದ್ದಾರೆ. ಇದರ ಜೊತೆಗೆ ನೀರಿನ ಮೂಲಗಳಾದ ಕೆರೆ ಕಟ್ಟೆಗಳೂ ಮಲೀನವಾಗಿವೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ಸಂಪನ್ಮೂಲ ಬಳಕೆ ಮಾಡಿಕೊಂಡು, ಜನರಿಗೆ ಅನುಕೂಲ ಮಾಡಿಕೊಡದೆ ಅನಾನುಕೂಲವನ್ನೇ ಹೆಚ್ಚು ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಗಣಿ ಕಂಪನಿಗಳು ಸ್ಥಳೀಯ ಜನರಿಗೆ ಮೂಲಸೌಕರ್ಯ ಒದಗಿಸುವ ಮೂಲಕ ಉತ್ತಮ ಕೆಲಸಕ್ಕೆ ಸಹಕಾರ ನೀಡಬೇಕು ಎಂದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ಸಿಎಸ್‍ಆರ್ ನಿಧಿಯನ್ನು ಕಾರ್ಪೊರೇಟ್ ಕಂಪನಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯಗಳಿಗೆ ಕಡ್ಡಾಯವಾಗಿ ಸ್ಥಳೀಯವಾಗಿಯೇ ಖರ್ಚು ಮಾಡಬೇಕು ಎಂಬುದಾಗಿ ಸರ್ಕಾರ ಇತ್ತೀಚೆಗಷ್ಟೇ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.

ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 15 ಸಾವಿರ ಎಕರೆಯಷ್ಟು ಸೋಲಾರ್ ಪಾರ್ಕ್ ಇದೆ. 2016 ರಿಂದ ಸೋಲಾರ್ ಪಾರ್ಕ್‍ಗಳು ಪ್ರಾರಂಭ ಮಾಡಲಾಗಿದ್ದು, ಅಲ್ಲಿಯೂ ಕೂಡ ಸಿಎಸ್ಆರ್ ನಿಧಿ ಬಳಕೆಯಾಗಬೇಕಿದೆ. ಸುಮಾರು 36 ಕೋಟಿ ಸಿಎಸ್ಆರ್ ನಿಧಿ ಬರಬೇಕಿದ್ದು, ಅದನ್ನು ಆಯಾ ಪ್ರದೇಶ, ಊರುಗಳಲ್ಲಿ ಖರ್ಚು ಮಾಡಲು ಕ್ರಿಯಾಯೋಜನೆ ರೂಪಿಸಲಾಗುವುದು. ಸಿಎಸ್ಆರ್ ನಿಧಿ ಬಳಕೆಗೆ ಮುನ್ನ ಕ್ರಿಯಾಯೋಜನೆ ರೂಪಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ನಂತರ ವಿನಿಯೋಗಿಸುವುದು ಕಡ್ಡಾಯ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲೆಯ ಗಣಿ ಕಂಪನಿಗಳು ನೆರವಿಗೆ ಧಾಮಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ಇತ್ತೀಚೆಗೆ ಓಬಣ್ಣನಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದರು, ಇಂತಹ ಸಂದರ್ಭದಲ್ಲಿ ಗಣಿ ಕಂಪನಿಗಳು ವಿಶಾಲ ಮನಸ್ಸಿನಿಂದ ಮುಂದೆ ಬಂದು ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಏಕಲವ್ಯ ಶಾಲೆ, ವಿಜ್ಞಾನ ಕೇಂದ್ರಕ್ಕೆ ತುರ್ತು ಭೂಮಿ: ಜಿಲ್ಲೆಯಲ್ಲಿ ಏಕಲವ್ಯ ಶಾಲೆ ಸ್ಥಾಪನೆಗಾಗಿ ಕೇಂದ್ರದ ಪರಿಶಿಷ್ಟ ವರ್ಗಗಳ ಮಂತ್ರಾಲಯವು ಮುಂದಾಗಿದ್ದು, ಇದಕ್ಕಾಗಿ ತುರ್ತಾಗಿ 15 ಎಕರೆ ಜಮೀನು ಮಂಜೂರಾತಿ ವ್ಯವಸ್ಥೆ ಮಾಡಬೇಕು. ಇದರ ಜೊತೆಗೆ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಕೆಎಂಇಆರ್‌ಸಿ ನಿಧಿಯಡಿ ಸುಮಾರು 15 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ 2 ರಿಂದ 5 ಎಕರೆ ಜಾಗ ಗುರುತಿಸಿ, ಮಂಜೂರಾತಿ ನೀಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಂಸದ ಗೋವಿಂದ ಎಂ ಕಾರಜೋಳ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‍ಪಿ ದಿನಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ ಸೇರಿದಂತೆ ಗಣಿ ಕಂಪನಿಗಳ ಪ್ರತಿನಿಧಿಗಳು ಇದ್ದರು.

----------------

ಪೋಟೋ: ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಗಣಿ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.

----------

ಪೋಟೋ: ಫೈಲ್ ನೇಮ್

- 27 ಸಿಟಿಡಿ1

--