ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ತನು-ಮನ ಶುದ್ಧವಾಗಿಟ್ಟುಕೊಂಡು ವೈಚಾರಿಕ ಮನೋಭಾವ ಬೆಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ತನು-ಮನ ಶುದ್ಧವಾಗಿಟ್ಟುಕೊಂಡು ವೈಚಾರಿಕ ಮನೋಭಾವ ಬೆಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿಗಳು ತಿಳಿಸಿದರು.ನಗರದ ಶ್ರೀ ಗುರುಕುಲಾನಂದಾಶ್ರಮದಲ್ಲಿ ೩೪೮ನೇ ಬೆಳದಿಂಗಳ ಶರಣ ಧರ್ಮಚಿಂತನಾಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪರಮಾತ್ಮ ಸರ್ವಾಂತರ್ಯಾಮಿಯಾಗಿರುವನು. ನಮ್ಮ ಅಂತರಂಗದಲ್ಲಿ ದೇವರನ್ನು ಕಾಣಬೇಕಾದರೆ ಏಕಾಗ್ರತೆ, ಶ್ರದ್ಧೆ, ಆಧ್ಯಾತ್ಮದ ಅರಿವು ಬೇಕಾಗಿರುತ್ತದೆ. ಸಕಲಜೀವಿಗಳಿಗೆ ಲೇಸನೇ ಬಯಸಿದ ಶರಣರು ದೇವರ ಅಸ್ತಿತ್ವವನ್ನು ವೈಚಾರಿಕವಾಗಿ ವಿಶ್ಲೇಷಿಸಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ದಯಾನಂದ್ ಜೇಡರ ದಾಸಿಮಯ್ಯ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಎಂಬ ವಿಷಯದ ಕುರಿತು ಮಾತನಾಡಿದರು. ಜೇಡರ ದಾಸಿಮಯ್ಯನವರು 12ಣೇ ಶತಮಾನದ ಆದ್ಯ ವಚನಕಾರರಾಗಿದ್ದು, ಕನ್ನಡ ಸಾಹಿತ್ಯ ಪರಂಪರೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ನಿಷ್ಕಲ್ಮತೆ, ಶ್ರಮ ಸಂಸ್ಕೃತಿ, ವರ್ಣ-ವರ್ಗ ಭೇದಗಳ ನಿವಾರಣೆ, ಅಹಿಂಸೆಯ ಜೀವನ ಶೈಲಿಯನ್ನು ಸಾರಿದವರಿದ್ದು ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದರು.ಈ ಸಂದರ್ಭದಲ್ಲಿ ಸೇವಾಕರ್ತರಾದ ಶ್ರೀ ಗುರುಕುಲ ಸಹಕಾರ ಸಂಘದ ವ್ಯವಸ್ಥಾಪಕರಾದ ಕೆ.ಎಸ್. ನಿಂಗಪ್ಪ, ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಸ್. ಸಿದ್ಧರಾಮಯ್ಯ, ನಿವೃತ್ತ ಪ್ರಾಂಶುಪಾಲ ಮಹಾಲಿಂಗಪ್ಪ, ನಿವೃತ್ತ ಸಬ್‌ಇನ್ಸಪೆಕ್ಟರ್ ಮಹದೇವಪ್ಪ, ಡಾ ವೆಂಕಟೇಶ್‌ಎಲ್.ಎಂ, ಬಾಬು, ರವಿಶಂಕರ್, ತೀರ್ಥಪ್ರಸಾದ್, ಭರತ್ ಮತ್ತಿತರರು ಉಪಸ್ಥಿತರಿದ್ದರು.