ಸಾರಾಂಶ
- ಹೈಸ್ಕೂಲ್ ಮೈದಾನದಲ್ಲಿ ಸ್ವದೇಶಿ ಮೇಳ: ಸಾಂಸ್ಕೃತಿಕ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜಾಗತೀಕರಣದ ಇಂದಿನ ದಿನಗಳಲ್ಲಿ ಸ್ವದೇಶಿ ಮೇಳಗಳಂಥ ಕಾರ್ಯಕ್ರಮಗಳ ಆಯೋಜನೆ ಹೆಚ್ಚು ಪ್ರಸ್ತುತವಾಗಿದೆ. ಪ್ರತಿಯೊಬ್ಬರೂ ದೇಶ ಹಾಗೂ ಸ್ವದೇಶಿ ವಸ್ತುಗಳ ಮೇಲಿನ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಜಾಗರಣ ಮಂಚ್ ಕರ್ನಾಟಕ ಮತ್ತು ಸಂಸ್ಕಾರ ಭಾರತಿ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಸ್ವದೇಶಿ ಮೇಳದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಸಂಗೀತ ಜುಗಲ್ ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದಾವಣಗೆರೆಯಲ್ಲಿ ಸ್ವದೇಶಿ ಜಾಗೃತಿ ಹಾಗೂ ಸ್ವದೇಶಿ ಮೇಳ ನಡೆಯುತ್ತಿದೆ. ಇಲ್ಲಿ ಹಾಕಲಾಗಿರುವ ಸ್ಟಾಲ್‌ಗಳು ಮಾರಾಟ ಮಾಡಿ ಹಣ ಮಾಡಲು ಬಂದಿಲ್ಲ. ದೇಶದ ಮೇಲಿನ ಅಭಿಮಾನ ಹೆಚ್ಚು ಮಾಡಲು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಬಂದಿರುವುದು. ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ದೇಶದ ಸಂಪತ್ತು ಅಮೂಲ್ಯ ಮತ್ತು ಶ್ರೇಷ್ಠವಾದದ್ದು ಎಂದು ಹೇಳಿದರು.
ದಾವಣಗೆರೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದೇನೆ. ಶೈಕ್ಷಣಿಕ ಕ್ಷೇತ್ರದ ಹಿನ್ನೆಲೆ ನನ್ನದು. ಇನ್ ಸೈಟ್ಸ್ ಸಂಸ್ಥೆ ಐಎಎಸ್ ಸಂಸ್ಥೆಯು ಕಳೆದ ಹತ್ತು ವರ್ಷಗಳಲ್ಲಿ 1500ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೀಡಿದೆ. ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಮುಂದುವರಿಯಬೇಕು ಎಂಬುದು ನನ್ನ ಅಪೇಕ್ಷೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಬಡವರ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಸ್ವಾಭಿಮಾನಿ ಬಳಗದ ಹೆಸರಿನಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕೈಯಲಾದಷ್ಟು ಸಹಾಯ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ದಾವಣಗೆರೆಯಂಥ ಜಿಲ್ಲೆಯಲ್ಲಿಯೂ ಐಎಎಸ್, ಐಪಿಎಸ್ ಓದುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇಲ್ಲಿಯೂ ಸುಸಜ್ಜಿತ ಶಾಖೆ ಆರಂಭಿಸಿದ್ದೇವೆ ಎಂದು ಹೇಳಿದರು.
ಕುಟುಂಬ ರಾಜಕಾರಣ ಅಭಿವೃದ್ಧಿಗೆ ಮಾರಕ ಎಂಬ ವಿಷಯ ಕುರಿತಂತೆ ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಾಲಾ ಮಕ್ಕಳು, ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಮೇಯರ್ ಹಾಗೂ ಕಾರ್ಯಕ್ರಮ ಸಂಘಟಕ ಎಸ್.ಟಿ.ವೀರೇಶ್, ಸಿದ್ಧಗಂಗಾ ಸಂಸ್ಥೆಯ ರೇಖಾರಾಣಿ, ಭಾರತೀಯ ಯೋಗ ಒಕ್ಕೂಟದ ವಾಸುದೇವ ರಾಯ್ಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.- - - -15ಕೆಡಿವಿಜಿ38:
ದಾವಣಗೆರೆಯಲ್ಲಿ ನಡೆದ ಸ್ವದೇಶಿ ಮೇಳದಲ್ಲಿ ನಡೆದ ಸಾಂಸ್ಕೃತಿಕ ಸಂಗೀತ ಜುಗಲ್ ಬಂದಿ ಕಾರ್ಯಕ್ರಮದಲ್ಲಿ ಜಿ.ಬಿ. ವಿನಯಕುಮಾರ ಮಾತನಾಡಿದರು.