ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಭಾಷೆಯ ಜತೆಗೆ ಸಾಮಾಜಿಕ ಸಂಬಂಧ - ಬಾಂಧವ್ಯಗಳನ್ನೂ ವೃದ್ಧಿಸಿಕೊಳ್ಳಬೇಕು ಎಂದು ಚಿತ್ರನಟ ರಘು ಪಾಂಡೇಶ್ವರ ಹೇಳಿದರು.ಅವರು ಭಾನುವಾರ ಇಲ್ಲಿನ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಕಸಾಪ ಬ್ರಹ್ಮಾವರ ಘಟಕ ಸಹಯೋಗದೊಂದಿಗೆ ಆಸಾಡಿ ಒಡ್ರ್ - ೨೦೨೪ ಊರ್ ಕೇರಿ ಬದ್ಕಿನ್ ಹಬ್ಬು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
ಮಕ್ಕಳು ಮೊಬೈಲ್ ಗೀಳಿನಲ್ಲಿ ಕಾಲಹರಣ ಮಾಡುವ ಈ ಕಾಲಘಟ್ಟದಲ್ಲಿ ಕುಂದಗನ್ನಡ ಸಂಸ್ಕೃತಿಯನ್ನು ಪರಿಚಯಿಸುವ ಈ ಕಾರ್ಯಕ್ರಮ ಪ್ರಶಂಸನೀಯ ಎಂದರು.ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ. ಕುಂದರ್ ಉದ್ಘಾಟಿಸಿ, ಕುಂದಾಪ್ರ ಭಾಷೆಯಲ್ಲಿ ವೈವಿಧ್ಯತೆ ಇದೆ. ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಬದುಕಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದರು.
ಗೋಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಸಭಾ ಕಾರ್ಯಕ್ರಮಕ್ಕೆ ತೆಂಗಿನ ಹೂ ಅರಳಿಸುವ ಮೂಲಕ ಚಾಲನೆ ನೀಡಿದರು. ಗ್ರಾಮೀಣ ಪರಿಕರವನ್ನು ಕಸಾಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಆಸಾಡಿ ಒಡ್ರ್ ಗ್ರಾಮೀಣ ತಿನಿಸುಗಳನ್ನು ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಸ್. ಕುಂದರ್ ಅನಾವರಣಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಕುಂದಗನ್ನಡದ ಬಹುಮುಖ ಪ್ರತಿಭೆ ಸುಜಾತ ಎಂ. ಬಾಯರಿ ಅವರಿಗೆ ನೀಡಲಾಯಿತು. ವಿಶೇಷ ಅಭಿನಂದನೆ ಪಂಚವರ್ಣ ಮಹಿಳಾ ಮಂಡಲದ ಪ್ರಥಮ ಅಧ್ಯಕ್ಷೆ ಕಲಾವತಿ ಅಶೋಕ್ ಅವರಿಗೆ ಸಲ್ಲಿಸಲಾಯಿತು. ಚಿತ್ರನಟ ರಘು ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು.
ಹಂದಟ್ಟು ಮಹಿಳಾ ಬಳಗ ವತಿಯಿಂದ ಮಟಪಾಡಿಯ ವಿಜಯಬಾಲನಿಕೇತ ಬಾಲಾಶ್ರಮಕ್ಕೆ ದಿನಸಿ ಪರಿಕರವನ್ನು ಅಧ್ಯಕ್ಷೆ ರತ್ನಾ ಪೂಜಾರಿ, ಆಶ್ರಮದ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.ಅಭ್ಯಾಗತರಾಗಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ, ರೋಟರಿ ಸಾಸ್ತಾನ ಅಧ್ಯಕ್ಷೆ ಲಿಲಾವತಿ ಗಂಗಾಧರ್, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಮಹಿಳಾ ಮಂಡಲದ ಸದಸ್ಯೆ ವೀಣಾ ಪ್ರಕಾಶ್ ಸ್ವಾಗತಿಸಿದರು. ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು. ಕಾರ್ಯಕ್ರಮವನ್ನು ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.