ಕುಲಾಂತರಿ ಬೆಳೆ: ರಾಷ್ಟ್ರೀಯ ನೀತಿ ಸಭೆ ಮುಕ್ತಗೊಳಿಸಲು ಆಗ್ರಹಿಸಿ ಪ್ರತಿಭಟನೆ

| Published : Sep 27 2024, 01:23 AM IST

ಕುಲಾಂತರಿ ಬೆಳೆ: ರಾಷ್ಟ್ರೀಯ ನೀತಿ ಸಭೆ ಮುಕ್ತಗೊಳಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಕೃಷಿ ಅತ್ಯಂತ ವಿಕ್ಷಿಪ್ತ ಕಸುಬಾಗಿದ್ದು, ಈ ಕಸುಬು ಅವಲಂಭಿಸಿರುವ ಸಮುದಾಯಗಳು ಹವಾಮಾನ ವೈಫರಿತ್ಯದಿಂದ ದಿನೇ ದಿನೇ ದುರ್ಬಲರಾಗುತ್ತಿರುವುದನ್ನು ನೀವು ತಿಳಿದಿದ್ದೀರಿ. ಹೀಗಾಗಿ ತಾವು ಕುಲಾಂತರಿ ಬೆಳೆಯೊಂದಿಗೆ ಹೆಚ್ಚಾಗುವ ಅಪಾಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸುವುದಾಗಿ ನಂಬಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಲಾಂತರಿ ಬೆಳೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯ ಸಂಬಂಧ ನಡೆಸುವ ಸಭೆಗಳನ್ನು ಮುಕ್ತವಾಗಿ ನಡೆಸುವಂತೆ ಸಾಮೂಹಿಕ ನಾಯಕತ್ವದ ಕರ್ನಾಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಸುಪ್ರೀಂ ಕೋರ್ಟ್ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ಬಗ್ಗೆ ಆದೇಶ ಹೊರಡಿಸಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ನೀತಿಯನ್ನು ನಿರೂಪಿಸುವ ಮುನ್ನ ಜನಸಾಮಾನ್ಯರ ನಡುವೆ ಸಮಾಲೋಚನಾ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.

ರೈತ ಪ್ರತಿನಿಧಿಗಳನ್ನು ಸಂಪರ್ಕಿಸಿ ತೊಡಗಿಸಿಕೊಳ್ಳಬೇಕು ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿರುವುದು ಸ್ವಾಗತಾರ್ಹ. ಏಕೆಂದರೆ ಕೃಷಿ ವಲಯಕ್ಕೆ ಸಂಬಂಧಿಸಿದ ನೀತಿ ನಿರೂಪಿಸುವಾಗ ರೈತ ಪ್ರತಿನಿಧಿಗಳ ನಡುವೆ ಸಮಾಲೋಚನೆ ನಡೆಯದೆ ಇರುವ ಹಿನ್ನೆಲೆಯಲ್ಲಿ ಕುಲಾಂತರಿ ಅಥವಾ ಕೃಷಿಯಲ್ಲಿ ಜೈವಿಕ ತಂತ್ರಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುವ ಸಮಾಲೋಚನಾ ಸಭೆಗಳು ಹೆಚ್ಚು ಮಹತ್ವ ಪಡೆಯುತ್ತವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ದೇಶದಲ್ಲಿನ ರೈತರ ಕೃಷಿ ಉತ್ಪಾದನಾ ಪರಿಸ್ಥಿತಿ ಮತ್ತು ಅವರ ಸಾಮಾಜಿಕ ಆರ್ಥಿಕ ಸನ್ನಿವೇಶಗಳು ಅತ್ಯಂತ ವೈವಿಧ್ಯಮ. ರೈತರಿಗಾಗಿ ರಾಷ್ಟ್ರೀಯ ನೀತಿಯಲ್ಲಿ ವ್ಯಾಕ್ಯಾನಿಸಿರುವಂತೆ ರೈತರೆಂದರೆ ಕೃಷಿ ಕಾರ್ಮಿಕರು, ಹಿಡುವಳಿದಾರರು, ಜೇನುಸಾಕಾಣಿಕೆದಾರರು, ಪಶುಪಾಲಕರು, ಹೈನುಗಾರಿಕೆ, ಮಾಂಸ ಮತ್ತು ಉಣ್ಣೆ ಉತ್ಪಾದಕರು, ಮೀನುಗಾರರು, ಆದಿವಾಸಿಗಳು, ಕಾಡು- ಉತ್ಪನ್ನ ಸಂಗ್ರಹಿಸುವವರು ಸೇರಿದಂತೆ ವಿವಿಧ ರೀತಿಯ ರೈತ ವರ್ಗಗಳನ್ನು ಒಳಗೊಂಡಿದೆ.

ಈಗಾಗಲೇ ಕೃಷಿ ಅತ್ಯಂತ ವಿಕ್ಷಿಪ್ತ ಕಸುಬಾಗಿದ್ದು, ಈ ಕಸುಬು ಅವಲಂಭಿಸಿರುವ ಸಮುದಾಯಗಳು ಹವಾಮಾನ ವೈಫರಿತ್ಯದಿಂದ ದಿನೇ ದಿನೇ ದುರ್ಬಲರಾಗುತ್ತಿರುವುದನ್ನು ನೀವು ತಿಳಿದಿದ್ದೀರಿ. ಹೀಗಾಗಿ ತಾವು ಕುಲಾಂತರಿ ಬೆಳೆಯೊಂದಿಗೆ ಹೆಚ್ಚಾಗುವ ಅಪಾಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸುವುದಾಗಿ ನಂಬಿದ್ದೇವೆ ಎಂದರು.

ತಾವು ಪ್ರಜಾಸತ್ತಾತ್ಮಕ ಸಮಾಲೋಚನೆ ನಡೆಸುವುದು, ಕುಲಾಂತರಿ ಬೆಳೆಗಳಿಂದ ಕೃಷಿ ಉತ್ಪಾದಕರು ಹಾಗೂ ಗ್ರಾಹಕರಾಗಿ ಹಾನಿಗೊಳಗಾಗುವ ದೇಶದ ರೈತರ ಧ್ವನಿ ಆಲಿಸುವಿರಿ ಎಂದು ನಿರೀಕ್ಷಿಸುತ್ತಿದ್ದೇವೆ. ಕೇವಲ ರೈತರ ಅಭಿಪ್ರಾಯ ಮತ್ತು ಅನುಭವವನ್ನು ಬರಿ ಕೇಳಿಸಿಕೊಳ್ಳುವುದು ಮಾತ್ರವಲ್ಲ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾಲೋಚನಾ ಪ್ರಕ್ರಿಯೆಯ ನೇತೃತ್ವವಹಿಸುವ ನೀವು ಅವರನ್ನು ಸಕ್ರಿಯವಾಗಿ ಮತ್ತು ಪರಿಪೂರ್ಣವಾಗಿ ಪರಿಗಣಿಸಿ ಗೌರವಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್, ಪ್ರಧಾನ ಕಾರ್ಯದರ್ಶಿ ಎಸ್. ರಘು ಇಮ್ಮಾವು, ಜಿಲ್ಲಾ ಮುಖಂಡ ಎಚ್.ಆರ್. ಬಂಗಾರಸ್ವಾಮಿ, ಗೌರವಾಧ್ಯಕ್ಷ ಕೆ.ಜಿ. ಶಿವಪ್ರಸಾದ್, ತಾಲೂಕು ಅಧ್ಯಕ್ಷ ಸತೀಶ್ ಮೊದಲಾದವರು ಇದ್ದರು.