ಸಾರಾಂಶ
- ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೇರು ಕೃಷಿ ಮಾಹಿತಿ
ಕನ್ನಡಪ್ರಭ ವಾರ್ತೆ, ಕೊಪ್ಪಮಲೆನಾಡು ಭಾಗದಲ್ಲಿ ಮೂಲ ಬೆಳೆಯಾಗಿರುವ ಅಡಕೆ, ಕಾಫಿಯೊಂದಿಗೆ ಉಪ ಬೆಳೆಯಾಗಿ ಲಾಭದಾಯಕವಾದ ಗೇರು ಕೃಷಿ ಮಾಡಲು ಕೃಷಿಕರು ಮುಂದಾಗಬೇಕು ಎಂದು ಹರಿಹರಪುರ ಗ್ರಾಪಂ ಸದಸ್ಯ ಎ.ಒ. ವೆಂಕಟೇಶ್ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೊಪ್ಪ-ನರಸಿಂಹರಾಜಪುರ ತಾಲೂಕಿನ ಯೋಜನಾ ವ್ಯಾಪ್ತಿಯ ಹರಿಹರಪುರದಲ್ಲಿ ನಡೆದ ಗೇರು ಕೃಷಿ ತರಬೇತಿ ಹಾಗೂ ಗೇರು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನವನೀತ ನರ್ಸರಿಯ ವೇಣುಗೋಪಾಲ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗೇರುಕೃಷಿ ಬಗ್ಗೆ ವಿವರಣೆ ನೀಡಿದರು. ವಿಜಯಲಕ್ಷ್ಮಿ ಪ್ರತಿಷ್ಠಾನ ಗೇರು ಸಸಿಗಳನ್ನು ಉಚಿತವಾಗಿ ನೀಡುತ್ತಿದ್ದು ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಸರಿಯಾದ ಮಾಹಿತಿಯೊಂದಿಗೆ ಗೇರು ಸಸಿ ವಿತರಣೆಗೆ ಮುಂದಾಗಿದೆ. ಈ ಸೌಲಭ್ಯ ಪಡೆದುಕೊಂಡ ಫಲಾನುಭವಿಗಳು ಗೇರು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು. ಕೊಪ್ಪ ತೋಟಗಾರಿಕಾ ಇಲಾಖೆ ಬಸವರಾಜಪ್ಪ ಮಾತನಾಡಿ ಗೇರುಕೃಷಿ ಬಗ್ಗೆ ಮಾಹಿತಿ, ನಿರ್ವಹಣೆ, ರೋಗ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ಅಂತರರಂಗಪ್ಪ ಇಲಾಖೆಯಿಂದ ನೀಡುವ ಸಬ್ಸಿಡಿ ವಿವರಗಳ ಬಗ್ಗೆ ತಿಳಿಸಿದರು. ಯಂತ್ರಶ್ರೀ ಬ್ಯಾಂಕ್ ಕೃಷಿ ಮೇಲ್ವಿಚಾರಕ ರಾಘವೇಂದ್ರ, ಕೃಷಿ ಮೇಲ್ವಿಚಾರಕ ಶಿವಕುಮಾರ್, ವಲಯದ ಮೇಲ್ವಿಚಾರಕಿ ಅನಿತಾ ಶೆಟ್ಟಿ, ಸ್ಥಳೀಯ ಸೇವಾಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ರೈತರು ಇದ್ದರು.