ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಇರಬೇಕು. ಆ ಗುರಿ ತಲುಪಲು ಗುರು ಇರಬೇಕು. ಜನಪದ ಎಂಬುದು ಜನಾಂಗದಿಂದ ಜನಾಂಗಕ್ಕೆ ಹರಿದು ಬಂದ ಸಾಹಿತ್ಯ. ಅಂತಹ ಸಾಹಿತ್ಯದಲ್ಲಿ ಗೊಂದಲಿಯೂ ಕೂಡ ಒಂದು. ಅಂತಹ ಕಲೆಗಳನ್ನು ಇಂದಿನ ವಿದ್ಯಾರ್ಥಿಗಳು ಇಂತಹ ವೇದಿಕೆಯಲ್ಲಿ ಪ್ರದರ್ಶಿಸಿ ಮತ್ತೆ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ ಎಂದು ಡಾ.ವೆಂಕಪ್ಪ ಸುತಗೇಕರ ಅಭಿಪ್ರಾಯಪಟ್ಟರು.ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಅಂತರ ಮಹಾವಿದ್ಯಾಲಯಗಳ 14ನೇ ಯುವಜನೋತ್ಸವ ವಿಜಯ ಕಲಾ ಸಂಗಮವನ್ನು ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಗೊಂದಲಿ ಸಾಹಿತ್ಯ ಅದರ ಮಹತ್ವವನ್ನು ವಿವರಿಸಿದ ಅವರು, ರಾಗಬದ್ಧವಾಗಿ ಹಾಡಿ ಆ ಸಾಹಿತ್ಯದ ಪರಿಚಯ ನೀಡಿದರು.
ತೋಟಗಾರಿಕೆ ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ತಿಮ್ಮಣ್ಣ ಅರಳಿಮಟ್ಟಿ ಮಾತನಾಡಿ, ಇಂದಿನ ಯುವಜನಾಂಗ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಅವಘಡಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ ಮನೋನಿಗ್ರಹ ಅವಶ್ಯ. ಅಂದಾಗ ಮಾತ್ರ ಉತ್ತಮ ನಾಗರಿಕನಾಗಲು ಸಾಧ್ಯ ಎಂದರು.ಸಮಾಜ ಗುರುತಿಸುವಂತೆ ವಿದ್ಯಾರ್ಥಿ ಮೌಲ್ಯಯುಕ್ತ ಜೀವನ ನಡೆಸಬೇಕು. ಯುವಜನೋತ್ಸವ ಬೇರೆ ಬೇರೆ ಸಂಸ್ಕೃತಿಗಳನ್ನು ಒಟ್ಟುಗೂಡಿಸುತ್ತದೆ. ಭವಿಷ್ಯತ್ತಿನಲ್ಲಿ ಮಧುರ ನೆನಪುಗಳನ್ನು ಕೊಡುತ್ತದೆ ಎಂದು ವಿವರಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕುಲಪತಿ ಡಾ.ಎನ್.ಕೆ.ಹೆಗಡೆ ವ್ಯಕ್ತಿತ್ವ ನಿರ್ಮಾಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಅಷ್ಟೇ ಮುಖ್ಯ. ಅವುಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತರಿಸಲಾಗುತ್ತದೆ. ಮೌಲ್ಯಾಧಾರಿತ ಜೀವನದಿಂದ ವಿದ್ಯಾರ್ಥಿಗಳ ಬದುಕು ಸುಂದರವಾಗುತ್ತದೆ. ಕೆಲಸದ ವಿಶ್ರಾಂತಿಗೆ ಮನರಂಜನೆ ಎಂಬಂತೆ ವರ್ಷಕ್ಕೊಮ್ಮೆ ಇಂತಹ ಆಹ್ಲಾದಕರ ವಾತಾವರಣ ಸೃಷ್ಟಿಸುವುದು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ನಾಂದಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.ಬೆಳಗ್ಗೆ ವಿಶ್ವವಿದ್ಯಾಲಯದ ಒಂಭತ್ತು ಮಹಾವಿದ್ಯಾಲಯಗಳ ತಂಡಗಳಿಂದ ಬಾಗಲಕೋಟೆ ನವನಗರದ ಕಾಳಿದಾಸ ಸರ್ಕಲ್ ದಿಂದ ಎಂಬಿಎ ಮಹಾವಿದ್ಯಾಲಯದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ ಪ್ರಥಮ, ಕೋಲಾರ ದ್ವಿತೀಯ, ಅರಭಾವಿ ತೃತೀಯ ಮತ್ತು ಬೀದರ ಮಹಾವಿದ್ಯಾಲಯ 4ನೇ ಸ್ಥಾನ ಪಡೆದವು. ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳು, ಒಂಭತ್ತು ತೋಟಗಾರಿಕೆ ಮಹಾವಿದ್ಯಾಲಯಗಳ ಡೀನ್, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರಪ್ಪ ಎಚ್. ವಿಸ್ತರಣಾ ನಿರ್ದೇಶಕಿ ಡಾ. ಲಕ್ಷ್ಮೀನಾರಾಯಣ ಹೆಗಡೆ, ಸಹಸಂಶೋಧನಾ ನಿರ್ದೇಶಕ ಡಾ.ಎಂ.ಎಸ್. ಲೋಕೇಶ್, ಬೀಜ ಘಟಕದ ಡಾ.ಶಾಂತಪ್ಪ, ಹಣಕಾಸು ಅಧಿಕಾರಿ, ಶಾಂತಾ ಕಡಿ, ಪಿ.ಬಿ. ಹಳೇಮನಿ, ವಿಜಯಕುಮಾರ ಭಜಂತ್ರಿ, ಸೇರಿದಂತೆ ಮಹಾವಿದ್ಯಾಲಯಗಳ ಡೀನ್, ತಂಡದ ಮ್ಯಾನೇಜರ್ ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿದ್ಯಾರ್ಥಿ ಕಲ್ಯಾಣ ಮತ್ತು ಯುವಜನೋತ್ಸವದ ಅಧ್ಯಕ್ಷ ಡಾ. ರಾಮಚಂದ್ರ ನಾಯಕ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶಶಿಕುಮಾರ್ ಪರಿಚಯಿಸಿದರು. ಡಾ.ಬಾಲಾಜಿ ಕುಲಕರ್ಣಿ ವಂದಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯಾಸೀನ್ ಬಾಗವಾನ್ ನಿರೂಪಿಸಿದರು.