ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಓದಿನ ಜತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ನಿರ್ಮಲಾ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಮಂಡ್ಯ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿ ವಾತಾವರಣದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಯಾರಿಗೇನೂ ಕಡಿಮೆ ಇಲ್ಲ. ಎಲ್ಲರಿಗೂ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ ಮುಟ್ಟುವ ಕಡೆಗೆ ತಮ್ಮ ಗಮನಹರಿಸಬೇಕು ಎಂದರು.ವಿದ್ಯಾರ್ಥಿಗಳಿಗೆ ಕಲಿಕೆ ನಿರಂತರ. ದೊಡ್ಡವರಾದ ಮೇಲೆ ವಿದ್ಯೆ ಮಹತ್ವ ಗೊತ್ತಾಗುತ್ತದೆ. ಓದಿನ ಜತೆಗೆ ಆಟ ಹಾಗೂ ವ್ಯಾಯಾಮ ಕಡ್ಡಾಯವಾಗಿ ಇರಲಿ. ಶಿಕ್ಷಕರನ್ನು ಪ್ರಶ್ನಿಸುವ ಮನೋಭಾವನೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಪಿಯು ಡಿಸಿ ಸಿ.ಚಲುವಯ್ಯ ಮಾತನಾಡಿ, ಮಕ್ಕಳ ವ್ಯಕ್ತಿತ್ವ ರೂಪಿಸುವ ಸಲುವಾಗಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರತಿಭೆ ಹೊರತರುವ ಪ್ರಯತ್ನ ವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದರು.ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್.ರಾಮಕೃಷ್ಣೇಗೌಡ, ಕಾರ್ಯದರ್ಶಿ ಎಂ.ಮಹೇಶ್ ಹಾಗೂ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು, ಬೆಂಗಳೂರಿನ ಚಾಮರಾಜಪೇಟೆ ದಿ ಮೇರಿ ಸಾಲಿಯನ್ ಸೊಸೈಟಿ ಅಧ್ಯಕ್ಷೆ ಡಾ.ಜೆಸ್ಸಿ ಮರ್ಲಿನ್, ಕಾರ್ಯದರ್ಶಿ ಪೌಲಿನ್, ನಿರ್ಮಲ ವಿದ್ಯಾ ಸಂಸ್ಥೆ ವ್ಯವಸ್ಥಾಪಕಿ ಮರೀನ ಜ್ಯೋತಿ, ಆಡಳಿತಾಧಿಕಾರಿ ಮೇರಿ ಜಯ, ಉಪನ್ಯಾಸರ ಸಂಘ ಕಾರ್ಯಾಧ್ಯಕ್ಷೆ ಲತಾ, ಖಜಾಂಚಿ ಶಾಂತರಾಜು, ನಿರ್ಮಲ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ರೀಟಾ ಜೋಯ್ಸ್, ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಬಳಿಕ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಏಕಪಾತ್ರಾಭಿನಯ, ಜಾನಪದ ನೃತ್ಯ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಕನ್ನಡ ಹಾಗೂ ಪ್ರಬಂಧ ಇಂಗ್ಲಿಷ್, ಭಾವಗೀತೆ, ಜಾನಪದ ಗೀತೆ, ಕನ್ನಡ ಚರ್ಚಾ ಸ್ಪರ್ಧೆ, ಇಂಗ್ಲಿಷ್ ಚರ್ಚಾ ಸ್ಪರ್ಧೆ, ವಿಜ್ಞಾನ ಉಪನ್ಯಾಸ, ಚಿತ್ರಕಲೆ, ವಿಜ್ಞಾನ ಮಾದರಿ ತಯಾರಿಕೆ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.