ಸಾರಾಂಶ
ಸಮುಚ್ಚಯ ಆವರಣದಲ್ಲಿ 6 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ
ಕೊನೆಗೂ ಈಡೇರಿದ ಸಾಂಸ್ಕೃತಿಕ ಚಿಂತಕರ ಒತ್ತಾಸೆಮಂಜುನಾಥ ಕೆ.ಎಂ.
ಕನ್ನಡಪ್ರಭವಾರ್ತೆ ಬಳ್ಳಾರಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯ ರಾಜಕೀಯ ಮುತ್ಸದ್ಧಿ ಎಂ.ಪಿ. ಪ್ರಕಾಶ್ ಅವರ ಹೆಸರಿಡಬೇಕು ಎಂಬ ಕೂಗಿಗೆ ಬಲಬಂದಿದೆ.
ಸಾಂಸ್ಕೃತಿಕ ಸಮುಚ್ಚಯದ ರೂವಾರಿ ಎಂ.ಪಿ. ಪ್ರಕಾಶ್ ಹೆಸರು ಚಿರಸ್ಥಾಯಿಯಾಗಿಸಲು ಸಮುಚ್ಚಯದ ಆವರಣದಲ್ಲಿ ಅವರ ಪ್ರತಿಮೆ ನಿರ್ಮಿಸಿ, ಅವರ ಹೆಸರಿಡಬೇಕು ಎಂದು ಅನೇಕ ವರ್ಷಗಳಿಂದಲೂ ಅಖಂಡ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಚಿಂತಕರು ಒತ್ತಾಯಿಸುತ್ತಲೇ ಬಂದಿದ್ದರು. ಈ ಸಂಬಂಧ ಅನೇಕ ಸಂಘಟನೆಗಳು ಹಲವು ಬಾರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಎಂ.ಪಿ. ಪ್ರಕಾಶ್ ಹೆಸರು ಘೋಷಿಸಲು ಆಗ್ರಹಿಸಿದ್ದವು.ಅಧಿವೇಶನದಲ್ಲಿ ಪ್ರಸ್ತಾಪ:
ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಜರುಗಿದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಹ ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಚಯಕ್ಕೆ ಎಂ.ಪಿ. ಪ್ರಕಾಶ್ ಹೆಸರಿಡಬೇಕು ಎಂದು ಪ್ರಸ್ತಾಪಿಸಿದರಲ್ಲದೆ, ಸಭಾಪತಿ ಬಸವರಾಜ ಹೊರಟ್ಟಿಗೆ ಮನವಿ ಸಲ್ಲಿಸಿದ್ದರು.ಎಂ.ಪಿ.ಪ್ರಕಾಶ ರಂಗಭೂಮಿ, ಸಂಗೀತ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ರಾಜಕೀಯವಾಗಿ ಎಷ್ಟೇ ಉನ್ನತ ಹುದ್ದೆ ಪಡೆದರೂ ಸರಳತೆ-ಸಹಜತೆ ಮೈಗೂಡಿಸಿಕೊಂಡಿದ್ದರು. ಸಮಾಜವಾದಿ ಚಳವಳಿಯ ಮೂಲಕ ರಾಜಕೀಯ ಪ್ರವೇಶಿಸಿ ಉಪ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರೂ ಸಾಹಿತ್ಯ, ರಂಗಭೂಮಿಯ ನಂಟು ಬಿಟ್ಟಿರಲಿಲ್ಲ. ಬಳ್ಳಾರಿಯಲ್ಲಿ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ಅವರೇ ಕಾರಣ. ಹಾಗಾಗಿ ಸಮುಚ್ಚಯಕ್ಕೆ ಅವರ ಹೆಸರನ್ನಿಡಲು ಸಭಾಪತಿಗಳಿಗೆ ನೀಡಿರುವ ಪತ್ರದಲ್ಲಿ ಮನವಿ ಮಾಡಿದ್ದರು.
₹25 ಲಕ್ಷ ವೆಚ್ಚದಲ್ಲಿ ಪ್ರತಿಮೆ:ಇನ್ನೆರೆಡು ದಿನಗಳಲ್ಲಿ ನಿರ್ಮಿತಿ ಕೇಂದ್ರದಿಂದ ಅಂದಾಜು ವೆಚ್ಚದ ಮಾಹಿತಿ ಸಲ್ಲಿಸುತ್ತಿದ್ದಂತೆಯೇ ಜಿಲ್ಲಾಧಿಕಾರಿ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳಿಸಿಕೊಡಲಾಗುವುದು. ಬಳಿಕ ಅದು ಸರ್ಕಾರಕ್ಕೆ ಸಲ್ಲಿಕೆಯಾಗಲಿದ್ದು, ಅಲ್ಲಿಂದ ಆದೇಶ ಬರುತ್ತಿದ್ದಂತೆಯೇ ಎಂ.ಪಿ. ಪ್ರಕಾಶ್ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪ್ರತಿಮೆ ನಿರ್ಮಾಣಕ್ಕೆ ಸುಮಾರು ₹ 20ರಿಂದ 25 ಲಕ್ಷ ವೆಚ್ಚವಾಗಲಿದ್ದು, ಇನ್ನೆರೆಡು ತಿಂಗಳಲ್ಲಿ ಪ್ರತಿಮೆ ಸ್ಥಾಪನೆ ಹಾಗೂ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.-----
ಉದ್ದೇಶ:ಬಳ್ಳಾರಿ ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಜರುಗಬೇಕು. ಇದಕ್ಕೆ ಪೂರಕ ಸಮುಚ್ಚಯ ನಿರ್ಮಾಣವಾಗಬೇಕು ಎಂಬ ಆಶಯ ಹೊತ್ತಿದ್ದ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ 1999ರಲ್ಲಿ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಮುಚ್ಚಯ ನಿರ್ಮಿಸಿದರು. ಸಮುಚ್ಚಯದಲ್ಲಿ ವಿಚಾರ ಸಂಕಿರಣ, ಕಲಾ ಪ್ರದರ್ಶನಾಲಯ, ಬಯಲು ರಂಗಮಂದಿರ, ಸಂಗೀತ ಮತ್ತು ಸಂಗೀತ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಸಮುಚ್ಚಯದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ, ಕನ್ನಡ ಭವನ, ಹೊಂಗಿರಣ ಸಭಾಂಗಣ, ಬ್ರೂಸ್‌ಫೂಟ್ ವಸ್ತು ಸಂಗ್ರಹಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿವೆ. ಖ್ಯಾತ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರು ಅವರ ಹೆಸರನ್ನು ಬಯಲು ರಂಗಮಂದಿರಕ್ಕೆ ಇರಿಸಲಾಗಿದ್ದು, ಬಯಲು ರಂಗಮಂದಿರ ಹಾಗೂ ಹೊಂಗಿರಣ ಸಭಾಂಗಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ. ಸಾಂಸ್ಕೃತಿಕ ಸಮುಚ್ಚಯದ ರೂವಾರಿಗಳು ಹಾಗೂ ನಾಡಿನ ಸರಳ ಸಜ್ಜನಿಕೆಯ ಮುತ್ಸದ್ಧಿ ರಾಜಕಾರಣಿ ಎಂ.ಪಿ. ಪ್ರಕಾಶ್ ಅವರ ಹೆಸರಿಡಬೇಕು ಎಂಬ ಕೂಗು ಈ ಮೊದಲಿನಿಂದಲೇ ಕೇಳಿ ಬಂದಿತ್ತು. ಪ್ರಕಾಶ್ ಪ್ರತಿಮೆ ನಿರ್ಮಿಸಿ, ಅವರ ಹೆಸರಿಟ್ಟರೆ ಅರ್ಥಪೂರ್ಣ ಕೆಲಸವಾದಂತಾಗುತ್ತದೆ ಎನ್ನುತ್ತಾರೆ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ.