ಬಳ್ಳಾರಿ: ದಕ್ಷಿಣ ಭಾರತದ ಮೂರು ಪ್ರಮುಖ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ದೀರ್ಘಕಾಲದಿಂದಲೂ ಭ್ರಾತೃತ್ವ ಹಾಗೂ ಸಾಂಸ್ಕೃತಿಕ ಸಂಬಂಧಗಳು ಬಲವಾಗಿ ನೆಲೆಯೂರಿವೆ ಎಂದು ಬಳ್ಳಾರಿಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಟಕ ವಿಭಾಗದ ಉಪನ್ಯಾಸಕ ಆರ್.ಪಿ.ಮಂಜುನಾಥ್. ಬಿ.ಜಿ. ದಿನ್ನೆ ತಿಳಿಸಿದರು.
ಹೈದರಾಬಾದ್‌ನ ಕಾಚೀಗೂಡದ ಕರ್ನಾಟಕ ಸಾಹಿತ್ಯ ಮಂದಿರದ 90ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ''''''''ಕನ್ನಡ ಮತ್ತು ತೆಲುಗು ರಂಗಭೂಮಿಯ ಇತ್ತೀಚಿನ ಬೆಳವಣಿಗೆಗಳು'''''''' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಭಾಷಾ ವೈವಿಧ್ಯತೆ ಇದ್ದರೂ, ಈ ಮೂರು ರಾಜ್ಯಗಳ ಜನರು ಪರಸ್ಪರ ಸಹಕಾರ, ಸ್ನೇಹ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಒಗ್ಗಟ್ಟನ್ನು ಬೆಳೆಸಿಕೊಂಡಿದ್ದಾರೆ. ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಅವಲಂಬನೆ ಹೆಚ್ಚಿದ್ದು, ಗಡಿ ಭಾಗಗಳಲ್ಲಿ ಜನರ ಜೀವನಶೈಲಿ ಸಹ ಬಹುಮಟ್ಟಿಗೆ ಒಂದೇ ರೀತಿಯಾಗಿದೆ. ಹಬ್ಬ-ಹರಿದಿನಗಳು, ಆಚರಣೆಗಳು ಹಾಗೂ ಸಂಪ್ರದಾಯಗಳಲ್ಲಿ ಸಹ ಸಾಮ್ಯತೆ ಕಂಡುಬರುತ್ತಿದೆ. ರಾಜಕೀಯ ಹಾಗೂ ಆಡಳಿತಾತ್ಮಕ ಮಟ್ಟದಲ್ಲಿಯೂ ಸಹಕಾರದ ಮನೋಭಾವ ಹೆಚ್ಚುತ್ತಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಸಹ ಈ ರಾಜ್ಯಗಳು ಕೈಜೋಡಿಸುತ್ತಿವೆ ಎಂದರು.
ಕನ್ನಡ ರಂಗಭೂಮಿ ಬೆಳವಣಿಗೆಗೆ ತಮಿಳು, ತೆಲುಗು ಹಾಗೂ ಮರಾಠಿ ರಂಗಭೂಮಿಗಳ ಪ್ರೇರಣೆಯಿದೆ. ವಿವಿಧ ಭಾಷೆಗಳ ನಾಟಕ ಪರಂಪರೆಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಅವುಗಳ ಕಲಾ ಶೈಲಿ, ಸಂಭಾಷಣಾ ವಿನ್ಯಾಸ ಮತ್ತು ವೇದಿಕೆ ನಿರ್ವಹಣಾ ತಂತ್ರಗಳು ಕನ್ನಡ ರಂಗಭೂಮಿಯ ಮೇಲೂ ಸ್ಪಷ್ಟವಾದ ಪ್ರಭಾವ ಬೀರಿವೆ.ತಮಿಳು ರಂಗಭೂಮಿಯ ಭಾವನಾತ್ಮಕತೆ, ತೆಲುಗು ನಾಟಕಗಳ ವೈವಿಧ್ಯಮಯ ಕಥಾಹಂದರ ಹಾಗೂ ಮರಾಠಿ ರಂಗಭೂಮಿಯ ಸಾಮಾಜಿಕ ಸಂದೇಶಾಧಾರಿತ ಪ್ರದರ್ಶನಗಳು ಕನ್ನಡ ನಾಟಕಗಳಿಗೆ ಹೊಸ ದಿಕ್ಕು ನೀಡಿವೆ. ಈ ಪರಸ್ಪರ ಪ್ರೇರಣೆಗಳಿಂದ ಕನ್ನಡ ರಂಗಭೂಮಿ ಹೆಚ್ಚು ಸಮೃದ್ಧವಾಗಿದ್ದು, ಕಲಾತ್ಮಕವಾಗಿ ಬೆಳವಣಿಗೆ ಕಂಡಿದೆ.
ಇಂತಹ ಸಮೃದ್ಧ ರಂಗಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಕಲಾವಿದರು ಮತ್ತು ಸಂಘಟನೆಗಳ ಮೇಲಿದೆ. ಹೊಸ ತಲೆಮಾರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿಸುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಗ್ರಾಮೀಣ ಮಟ್ಟದಲ್ಲಿ ರಂಗಭೂಮಿ ಚಟುವಟಿಕೆ ವಿಸ್ತರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೊ. ಲಿಂಗಪ್ಪ ಗೋನಾಳ್ ಮಾತನಾಡಿ, ಕನ್ನಡ ಮತ್ತು ತೆಲುಗು ಜಾನಪದ ಕಲೆಗಳು ಪರಸ್ಪರ ಪೂರಕವಾಗಿ ಬೆಳೆದಿವೆ. ಆದರೆ, ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಈ ಮೌಲ್ಯಯುತ ಕಲೆಗಳು ಅವಸಾನದ ಹಾದಿ ಹಿಡಿದಿರುವುದು ವಿಷಾದನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಸಿ. ರಮೇಶಬಾಬು ಅವರು, ಕಲೆಯನ್ನು ಉಳಿಸಲು ಇಂತಹ ವಿಚಾರ ಸಂಕಿರಣಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಆಶಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಡಾ. ಟಿ.ಎಚ್. ಲವಕುಮಾರ್, ಜಗದೀಶ್ ಜಾಲ ಹಾಗೂ ಸಾಹಿತ್ಯ ಮಂದಿರದ ಪದಾಧಿಕಾರಿಗಳಾದ ಸುರೇಂದ್ರ ಕಟಗೇರಿ, ನರಸಿಂಹಮೂರ್ತಿ ಜೋಯಿಸ್ ಉಪಸ್ಥಿತರಿದ್ದರು.