ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಬುಡಕಟ್ಟು ನೆಲದಲ್ಲಿ ಸಾಲು ಎತ್ತಿನಗಾಡಿಗಳ ಸಾಂಸ್ಕೃತಿಕ ವೈಭವವೆಂದೇ ಖ್ಯಾತಿ ಪಡೆದ ಮಿಂಚೇರಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಗಾದ್ರಿ ಪಾಲನಾಯಕ ಸ್ವಾಮಿಯ ಸಾಲು ಸಾಲು ಎತ್ತಿನ ಗಾಡಿಗಳೊಂದಿಗೆ ಹಳ್ಳಿಯ ಸೊಬಗಿನಿಂದ ಕಂಗೊಳಿಸುವ ಜಾತ್ರಾ ಮಹೋತ್ಸವಕ್ಕೆ ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮ ಸಜ್ಜಾಗಿದೆ.
ಬಚ್ಚಬೋರನಹಟ್ಟಿ ಗ್ರಾಮದ ಮ್ಯಾಸ ನಾಯಕ ಸಮುದಾಯದವರು ತಮ್ಮ ಆರಾಧ್ಯ ದೈವ ಹಾಗೂ ಸಾಂಸ್ಕೃತಿಕ ವೀರ ಎಂದೇ ಖ್ಯಾತಿ ಗಳಿಸಿರುವ, ಗಾದ್ರಿ ಪಾಲನಾಯಕ ಸ್ವಾಮಿಯ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ಮಿಂಚೇರಿ ಯಾತ್ರೆ ಕೈಗೊಳ್ಳುತ್ತಿರುವುದು ಜಾತ್ರೆಯ ವಿಶೇಷ. ಎತ್ತಿನ ಗಾಡಿ ಶೃಂಗಾರ ಮಾಡಿಕೊಂಡು ಸಿರಿಗೆರೆ ಸಮೀಪದ ಮಿಂಚೇರಿ ಗುಡ್ಡದ ಗಾದ್ರಿಪಾಲನಾಯಕನ ಸನ್ನಿಧಾನಕ್ಕೆ ಪಯಣ ಬೆಳೆಸಲಿದ್ದಾರೆ.ಈ ಬಾರಿಯ ಮಿಂಚೇರಿ ಜಾತ್ರಾ ಮಹೋತ್ಸವ ಡಿಸೆಂಬರ್ 23 ರಿಂದ 28 ರವರೆಗೆ ನಡೆಯಲಿದೆ. ಶನಿವಾರ ಉದಯ ಕಾಲಕ್ಕೆ ದೇವರ ಮುತ್ತಯ್ಯಗಳ ಆಗಮನದ ನಂತರ ಬೆಳಗ್ಗೆ 7ಕ್ಕೆ ದೇವರ ಮಜ್ಜನಬಾವಿಯಲ್ಲಿ ಗುರು-ಹಿರಿಯರೊಂದಿಗೆ ಗಂಗಾಪೂಜೆ ಹಾಗೂ ಬೆಳಗ್ಗೆ 11.30ಕ್ಕೆ ಮಿಂಚೇರಿ ಯಾತ್ರಾ ಮಹೋತ್ಸವ ಆರಂಭವಾಗಲಿದೆ. ದೇವರ ಮುತ್ತಯ್ಯಗಳೊಂದಿಗೆ ಊರಿನಿಂದ ನಿರ್ಗಮಿಸಿ, ಅಲ್ಲಿಂದ ಕಕ್ಕಲು ಬೆಂಚಲ್ಲಿ ಪೂಜೆ ಸಲ್ಲಿಸಿ, ಯಾತ್ರೆ ಮುಂದುವರೆಯುವುದು. ಮಿಂಚೇರಿ ಮಹೋತ್ಸವ ಉದ್ಘಾಟನೆ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಗಣ್ಯರು ಆಗಮಿಸಲಿದ್ದು, ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮ ಸೇರಿ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಭಾಗವಹಿಸಲಿದ್ದಾರೆ.
ಜಾತ್ರೆ ಹಿನ್ನಲೆ: ಬುಡಕಟ್ಟು ಸಂಸ್ಕೃತಿಯ ನಾಯಕ ಜನಾಂಗದ ನಾಯಕ ಎಂದೇ ಹೆಸರಾಗಿರುವ ಗಾದ್ರಿಪಾಲನಾಯಕ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಮದಕರಿಪುರ ಗ್ರಾಮದ ಬಳಿಯ ಕಾಡಿನಲ್ಲಿ ನೆಲೆಸಿರುತ್ತಾನೆ. ಆತ ಗೋ ಸಂರಕ್ಷಕನೆಂದೇ ಖ್ಯಾತಿ. ಆತನಿಗೆ ಕಂಚವ್ವ, ಕಾಮವ್ವರೆಂಬ ಇಬ್ಬರು ಪತ್ನಿಯರು. ಅಡವಿಯಲ್ಲಿ ಪಶುಪಾಲನೆ ಸಂದರ್ಭದಲ್ಲಿ ಹುಲಿಯೊಂದಿಗೆ ಅನೋನ್ಯ ಒಪ್ಪಂದದಿಂದಾಗಿ ಹುಲಿಮರಿಗಳನ್ನು ಹಸು ಕರುಗಳ ರೊಪ್ಪದಲ್ಲಿಯೇ ಬಿಡಲಾಗಿತ್ತು. ಒಮ್ಮೆ ಗಾದ್ರಿಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ, ಕಾಟಯ್ಯ ರೊಪ್ಪಕ್ಕೆ ಬರುತ್ತಾರೆ. ಯಾರೂ ಕಾಣದಿದ್ದಾಗ ರೊಪ್ಪದಲ್ಲಿದ್ದ ಹುಲಿಮರಿ ಕೊಲ್ಲುತ್ತಾರೆ. ಇದರಿಂದ ಗಾದ್ರಿಪಾಲನಾಯಕ ವಚನಭ್ರಷ್ಟನಾದೆನೆಂದು ದುಃಖಿಸುತ್ತಾನೆ. ಕೊನೆಗೆ ಹುಲಿಯೊಂದಿಗೆ ಕಾದಾಡಿ ಹುಲಿ ಮತ್ತು ಗಾದ್ರಿಪಾಲನಾಯಕ ಸಾವನ್ನಪ್ಪುತ್ತಾರೆ. ಹುಲಿ ಹಾಗೂ ಗಾದ್ರಿಪಾಲನಾಯಕ ಸಮಾಧಿಗಳು ಇಂದಿಗೂ ಮಿಂಚೇರಿ ಬೆಟ್ಟದಲ್ಲಿ ಇವೆ.ಮಿಂಚೇರಿ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶ ಮಾತ್ರವಲ್ಲದೇ ಧಾರ್ಮಿಕ ಕೇಂದ್ರವೂ ಹೌದು. ಮಿಂಚೇರಿ ಬೆಟ್ಟ ಮ್ಯಾಸ ನಾಯಕರ ಆರಾಧ್ಯ ದೈವ ಗಾದ್ರಿಪಾಲನಾಯಕನ ನೆಲಬೀಡಾಗಿದೆ. ಇಲ್ಲಿಗೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಗುತ್ತದೆ. ಸಜ್ಜೆ ರೊಟ್ಟೆ, ಗಾರ್ಗೆ, ಕರಜೀಕಾಯಿ ಮಿಂಚೇರಿ ಮಹೋತ್ಸವದ ವಿಶೇಷ ಖಾದ್ಯವಾಗಿದೆ. ಯಾತ್ರೆಗಾಗಿ ಖಾದ್ಯ ತಯಾರಿ ಸಿದ್ಧತೆ ಭರದಿಂದ ನಡೆಯುತ್ತಿದೆ.
ಯಾತ್ರೆ ಸಾಗುವ ಮಾರ್ಗ: ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದಿಂದ ಆರಂಭವಾದ ಮಿಂಚೇರಿ ಮಹೋತ್ಸವವು ಗೋನೂರು, ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೇಗುದ್ದು, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ದಡ್ಡಿಗೆನಹಾಳ್, ಡಿ.ಮದಕರಿಪುರ, ಮಿಂಚೇರಿಪುರದವರಗೆ ಯಾತ್ರೆ ಸಾಗಲಿದೆ.ಡಿಸೆಂಬರ್ 27ರಂದು ಮಧ್ಯಾಹ್ನ 2 ಕ್ಕೆ ಗಂಡುಮೆಟ್ಟಿದ ನಾಡು ಚಿತ್ರದುರ್ಗಕ್ಕೆ ಮಿಂಚೇರಿ ಮಹೋತ್ಸವದ ಮೆರವಣಿಗೆ ಆಗಮನವಾಗಲಿದೆ. ನಂತರ ರಾಜ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ, ಕೋಲಾಟ, ಭಜನೆ, ಉರುಮೆ, ಕುಣಿತ, ತಮಟೆ, ವಾದ್ಯಗಳೊಂದಿಗೆ ಕಹಳೆಯ ನಾದದೊಂದಿಗೆ ಜನಪದ ನೃತ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.
;Resize=(128,128))
;Resize=(128,128))
;Resize=(128,128))